ಚೆನ್ನೈ: ಜಯಲಲಿತಾ ಅವರ ನಿಧನದಿಂದಾಗಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಗೆ ನಾಯಕತ್ವದ ಕೊರತೆ ಉಂಟಾಗಿದ್ದು, 3 ದಶಕಗಳಲ್ಲಿ ಎರಡನೇ ಬಾರಿಗೆ ಎಐಎಡಿಎಂಕೆ ಪಕ್ಷ ನಾಯಕನಿಲ್ಲದೇ ಅನಾಥವಾಗಿದೆ.
ಪಕ್ಷದ ಸ್ಥಾಪಕ ಎಂ ಜಿ ರಾಮಚಂದ್ರನ್ (ಎಂಜಿಆರ್) ಅವರ ನಿಧನದ ನಂತರ ಎಐಎಡಿಎಂಕೆ ಮೊದಲ ಬಾರಿಗೆ ನಾಯಕತ್ವವನ್ನು ಕಳೆದುಕೊಂದು ಕತ್ತಲಲ್ಲಿ ಮುಳುಗಿತ್ತು. ಈಗ ಜಯಲಲಿತಾ ನಿಧನದಿಂದಾಗಿ ಪಕ್ಷ ಮತ್ತೊಮ್ಮೆ ನಾಯಕನಿಲ್ಲದೆ ಅನಾಥವಾಗಿದೆ. ಜಯಲಲಿತಾ ಅವರ ವ್ಯಕ್ತಿತ್ವಕ್ಕೆ ಸರಿ ಹೊಂದುವ ನಾಯಕತ್ವ ಈ ವರೆಗೂ ಎಐಎಡಿಎಂಕೆ ಪಕ್ಷದಲ್ಲಿಲ್ಲ.
ಇತ್ತೀಚೆಗಷ್ಟೇ ಜಯಲಲಿತಾ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿದ್ದ ಎಐಎಡಿಎಂಕೆ ಐತಿಹಾಸಿಕ ಗೆಲುವು ದಾಖಲಿಸಿತ್ತು. ಪರಿಣಾಮವಾಗಿ ಕಾರ್ಯಕರ್ತರಲ್ಲೂ ಹೊಸ ಹುರುಪು ಮೂಡಿತ್ತು. ಆದರೆ ಜಯಲಲಿತಾ ನಿಧನದಿಂದಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಹೊಸ ನಾಯಕನನ್ನು ಹುಡುಕುವ ಅನಿವಾರ್ಯತೆಗೆ ಎಐಎಡಿಎಂಕೆ ಸಿಲುಕಿದೆ.
ಜಯಲಲಿತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸ್ಥಿತಿ ಎದುರಾದಾಗಲೆಲ್ಲಾ, ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ, ತಮಿಳುನಾಡಿನ ನೂತನ ಸಿಎಂ ಪನೀರ್ ಸೆಲ್ವಂ ಅವರು ಜಯಲಲಿತಾ ಅವರು ಹೊಂದಿದ್ದ ನಾಯಕತ್ವಕ್ಕೆ ಸರಿ ಹೊಂದುವಂತಹ ನಾಯಕತ್ವ ಹೊಂದಿಲ್ಲ. ಜಯಲಲಿತಾ ನಿಧನದ ಬೆನ್ನಲ್ಲೆ ನಡೆಯಲಿರುವ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ ಎಐಎಡಿಎಂಕೆಗೆ ಸವಾಲಾಗಿದ್ದು ನಾಯಕತ್ವದ ಪರೀಕ್ಷೆಯೂ ಪನೀರ್ ಸೆಲ್ವಂಗೆ ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Comments are closed.