ಆಗ್ರಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಶಿರಚ್ಛೇದ ಮಾಡಿದರೇ ಬಹುಮಾನ ನೀಡುವುದಾಗಿ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷದ ಬಾಗ್‌ಪತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ತರುಣ್ ದೇವ್ ಯಾದವ್, ಪ್ರಧಾನಿ ಮೋದಿ, ಅಮಿತ್ ಶಾ ದೇಶದಲ್ಲಿ ತುರ್ತು ಪರಿಸ್ಥಿತಿ ತಲೆದೋರುವಂತೆ ಮಾಡಿದ್ದಾರೆ. ಗೋಧ್ರಾ ಹಿಂಸಾಚಾರಕ್ಕೂ ಇಬ್ಬರು ಹೊಣೆಯಾಗಿದ್ದಾರೆ, ಅವರಿಬ್ಬರನ್ನು ಶಿರಚ್ಛೇದಗೈದರೆ ಸೂಕ್ತ ಬಹುಮಾನ ನೀಡುವುದಾಗಿ ತಮ್ಮ ಲೆಟರ್ ಹೆಡ್ ಇರೋ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮದೇ ಕೈಬರಹದ ಪತ್ರದಲ್ಲಿ ತರುಣ್ ದೇವ್ ಯಾದವ್ ಕಿರಿಯರಿಂದ ವಯೋವೃದ್ಧರವರೆಗೆ ದುಡ್ಡಿಗಾಗಿ ಬ್ಯಾಂಕ್ ಎಟಿಎಂಗಳ ಬಳಿ ಕ್ಯೂ ನಿಂತು ಅನುಭವಿಸುತ್ತಿರುವ ಕಷ್ಟದ ಕುರಿತು ಗಮನ ಸೆಳೆದಿದ್ದಾರೆ. ಸಮಾಜವಾದಿ ಪಕ್ಷದ ಸಭೆಯೊಂದರಲ್ಲಿ ಯಾದವ್ ಈ ಪತ್ರವನ್ನು ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ತರುಣ್ ದೇವ್‌ರ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷ ಖಂಡಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಹೇಯವಾದ ಹೇಳಿಕೆ ನೀಡಿರುವ ತರುಣ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಪಕ್ಷದ ವಕ್ತಾರ ಮೊಹಮದ್ ಶಾಹಿದ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ‘ಪಕ್ಷದ ಎಲ್ಲ ಜಿಲ್ಲಾ ಘಟಕಗಳನ್ನು ವಜಾಗೊಳಿಸಿದ್ದು, ತರುಣ್ ಯಾದವ್ ಸದ್ಯ ಭಾಗಪತ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಇಲ್ಲ’ ಎಂದಿದ್ದಾರೆ. ಆದರೆ ತರುಣ್ ಯಾದವ್ ರಿಲೀಸ್ ಮಾಡಿರೋ ಪತ್ರದಲ್ಲಿ ಯುವಜನ ಸಮಾಜವಾದಿ ಪಕ್ಷದ ಭಾಗಪತ್ ಜಿಲ್ಲಾಧ್ಯಕ್ಷ ಎಂದೇ ಇದೆ. ಈ ವಿಡಿಯೋವನ್ನು ಡಿಸೆಂಬರ್ 7 ರಂದು ಬಿಡುಗಡೆ ಮಾಡಲಾಗಿದೆ.
Comments are closed.