ರಾಷ್ಟ್ರೀಯ

ಜನರಿಂದ 5,000ಕ್ಕಿಂತ ಹೆಚ್ಚು ಮೊತ್ತ ಸ್ವೀಕರಿಸಲು ನಿರಾಕರಿಸುತ್ತಿರುವ ಬ್ಯಾಂಕ್‍ಗಳು

Pinterest LinkedIn Tumblr

bank-queue_0-final

ನವದೆಹಲಿ: ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂದು ಆರ್‌ಬಿಐ ಹೇಳಿದ್ದರೂ, ಕೆಲವೊಂದು ಬ್ಯಾಂಕ್‍ಗಳು ₹5,000ಕ್ಕಿಂತ ಹೆಚ್ಚು ಹಣ ಸ್ವೀಕರಿಸಲು ನಿರಾಕರಿಸಿವೆ.

ರದ್ದು ಮಾಡಲ್ಪಟ್ಟ ₹500 ಮತ್ತು ₹1000 ನೋಟುಗಳು ನಿಮ್ಮ ಬಳಿಯಲ್ಲಿದ್ದರೆ ಡಿಸೆಂಬರ್ 30ರೊಳಗೆ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು. ಅದೇ ವೇಳೆ ಹೀಗೆ ಜಮೆ ಮಾಡುವಾಗ ಈವರೆಗೆ ಯಾಕೆ ಜಮೆ ಮಾಡಿಲ್ಲ ಎಂಬುದಕ್ಕೆ ಬ್ಯಾಂಕ್‌‍ನ ಇಬ್ಬರು ಅಧಿಕಾರಿಗಳಿಗೆ ವಿವರಣೆ ನೀಡಬೇಕು ಎಂದು ಆರ್‌ಬಿಐ ಹೊಸ ಆದೇಶ ನೀಡಿತ್ತು.

ಆದರೆ ₹5000ಕ್ಕಿಂತ ಹೆಚ್ಚು ಹಣವನ್ನು ಜಮೆ ಮಾಡಲು ಅವಕಾಶ ಕೊಟ್ಟು ಆನಂತರ ಇಷ್ಟೊಂದು ಮೊತ್ತವನ್ನು ಯಾಕೆ ಸ್ವೀಕರಿಸಿದಿರಿ? ಎಂಬ ಪ್ರಶ್ನೆಗೆ ಉತ್ತರಿಸುವ ತೊಂದರೆ ತೆಗೆದುಕೊಳ್ಳಲು ನಾನು ತಯಾರಿಲ್ಲ ಎಂದು ಬ್ಯಾಂಕ್‍‌ ಮ್ಯಾನೇಜರ್‍ ಹೇಳಿದ್ದು, ಹಣ ಸ್ವೀಕರಿಸಲು ಮುಂದಾಗುತ್ತಿಲ್ಲ ಎಂಬ ದೂರುಗಳು ಖಾತೆದಾರರರಿಂದ ಕೇಳಿ ಬರುತ್ತಿದೆ.

ಇನ್ನು ಕೆಲವು ಬ್ಯಾಂಕ್‍ಗಳಿಗೆ ಹೋದಾಗ ಬ್ಯಾಂಕ್‍ನಲ್ಲಿ ಇರುವುದು ಒಬ್ಬ ಮ್ಯಾನೇಜರ್. ಇನ್ನುಳಿದವರೆಲ್ಲಾ ಗುಮಾಸ್ತ ವರ್ಗದವರು. ಹೀಗಿರುವಾಗ ಹಣ ಜಮೆ ಮಾಡುವವರು ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ವಿವರಣೆ ನೀಡಬೇಕು ಎಂದು ಆರ್‌ಬಿಐ ಹೇಳುತ್ತಿದೆ. ಬ್ಯಾಂಕ್‍ನಲ್ಲಿ ಇಬ್ಬರು ಅಧಿಕಾರಿಗಳು ಯಾರಿದ್ದಾರೆ? ಎಂದು ಇನ್ನೊಂದು ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದ್ದಾರೆ.

ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಹಣವನ್ನು ಒಂದು ಬಾರಿ ಮಾತ್ರ ಜಮೆ ಮಾಡಿದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಆದರೆ ಈ ಬಗ್ಗೆ ನಮಗೆ ಯಾವುದೇ ಅಧಿಕೃತ ಪ್ರಕಟಣೆ ಸಿಕ್ಕಿಲ್ಲ. ಹೀಗಿರುವಾಗ ₹5000ಕ್ಕಿಂತ ಹೆಚ್ಚು ಹಣ ಸ್ವೀಕರಿಸುವುದು ಹೇಗೆ? ಎಂಬುದು ಬ್ಯಾಂಕ್ ಅಧಿಕಾರಿಗಳ ಪ್ರಶ್ನೆಯಾಗಿದೆ.

ಅದೇ ವೇಳೆ ಮುಂದಿನ ಆದೇಶ ಬರುವ ಮುನ್ನ ಹಣವನ್ನು ಜಮೆ ಮಾಡಿಬಿಡಬೇಕು ಎಂಬ ಧಾವಂತದಲ್ಲಿ ಜನ ಬ್ಯಾಂಕ್‍ಗಳಿಗೆ ದೌಡಾಯಿಸುತ್ತಿದ್ದಾರೆ.

Comments are closed.