ನವದೆಹಲಿ: ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂಬ ನಿಯಮವನ್ನು ಆರ್‌ಬಿಐ ಹಿಂಪಡೆದಿದೆ.
ಇನ್ನು ಮಂದೆ ಕೆವೈಸಿ ಖಾತೆದಾರರು ₹5,000ಕ್ಕಿಂತ ಹೆಚ್ಚು ಮೊತ್ತವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡಬಹುದು. ಹೀಗೆ ಜಮೆ ಮಾಡುವವರನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಆರ್‌ಬಿಐ ಹೇಳಿದೆ.
ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಆನಂತರ ಹಲವಾರು ರೀತಿಯ ನಿರ್ಬಂಧಗಳನ್ನು ವಿಧಿಸಿತ್ತು.
ಎರಡು ದಿನಗಳ ಹಿಂದೆಯಷ್ಟೇ ಆರ್‌ಬಿಐ ಹೊರಡಿಸಿದ ಹೊಸ ನಿಯಮದ ಪ್ರಕಾರ ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ₹5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಲು ಅವಕಾಶ ನೀಡಲಾಗಿತ್ತು.
ಹೀಗೆ ಜಮೆ ಮಾಡುವಾಗ ಈವರೆಗೆ ಯಾಕೆ ಜಮೆ ಮಾಡಿಲ್ಲ ಎಂಬುದಕ್ಕೆ ಬ್ಯಾಂಕ್ ಅಧಿಕಾರಿಗಳಿಗೆ ವಿವರಣೆ ನೀಡಬೇಕು. ಈ ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿರಬೇಕು. ವಿವರಣೆಯನ್ನು ದಾಖಲಿಸಿಕೊಳ್ಳಬೇಕು. ಯಾವುದೇ ಖಾತೆಗೆ ರದ್ದಾದ ನೋಟುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮಾಡಿದ ಜಮೆ ₹5,000 ಮೀರಿದರೆ ₹5,000ಕ್ಕಿಂತ ಹೆಚ್ಚು ಜಮೆ ಮಾಡಿದವರಿಗೆ ಅನ್ವಯವಾಗುವ ಎಲ್ಲ ಷರತ್ತು ಅನ್ವಯವಾಗುತ್ತವೆ.
₹5,000ದ ಒಳಗಿನ ಮೊತ್ತ ಜಮೆ ಮಾಡಲು ಯಾವುದೇ ನಿರ್ಬಂಧ ಇಲ್ಲ. ಬೇರೆಯವರ ಖಾತೆಗೂ ರದ್ದಾದ ನೋಟು ಜಮೆ ಮಾಡಲು ಅವಕಾಶ ಇದೆ. ಆದರೆ ಖಾತೆದಾರರ ಅನುಮತಿ ಪತ್ರ, ಜಮೆ ಮಾಡುವವರ ಗುರುತಿನ ಚೀಟಿ ನೀಡಬೇಕು.
ಗುರುತಿನ ಚೀಟಿ ನೀಡಿಲ್ಲದ (ಕೆವೈಸಿ) ಖಾತೆಗಳಿಗೆ ₹5,000ಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡುವಂತಿಲ್ಲ. ಈ ಖಾತೆಯಲ್ಲಿ ಗರಿಷ್ಠ ₹50,000ಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ. ಉದಾಹರಣೆಗೆ ಖಾತೆಯಲ್ಲಿ ₹48 ಸಾವಿರ ಇದ್ದರೆ, ಮತ್ತೆ ₹2,000 ಮಾತ್ರ ಜಮೆ ಮಾಡಬಹುದು.
ಈ ನಿಯಮದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಇದೀಗ ಆರ್‌ಬಿಐ ಪ್ರಸ್ತುತ ಆದೇಶವನ್ನು ಹಿಂಪಡೆದಿದೆ.
Comments are closed.