ರಾಷ್ಟ್ರೀಯ

ಕುಟುಂಬಸ್ಥರಿಗೆ ಟಿಕೆಟ್ ಕೇಳಲೇಬೇಡಿ: ಮೋದಿ

Pinterest LinkedIn Tumblr


ನವದೆಹಲಿ: ಪಂಚರಾಜ್ಯಗಳ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ​ಯಲ್ಲಿ ಪ್ರಧಾನಿ ಮೋದಿ ಅವರು, ಚುನಾವಣೆಯನ್ನೇ ಕೇಂದ್ರವಾಗಿಟ್ಟುಕೊಂಡು ಮಾತನಾಡಿದ್ದಾರೆ. ‘‘ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧಿಕರು, ಸಹೋದರರು, ಮಗ, ಮಗಳಿಗೆ ಟಿಕೆಟ್‌ ನೀಡುವಂತೆ ಪಕ್ಷದ ಮೇಲೆ ಒತ್ತಡ ತರಬೇಡಿ. ಅವರು ಅರ್ಹರು ಎಂದು ಅನಿಸಿದರೆ ಸ್ವತಃ ಪಕ್ಷವೇ ಅವರಿಗೆ ಟಿಕೆಟ್‌ ನೀಡುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕು. ಎಲ್ಲ 5 ರಾಜ್ಯಗಳಲ್ಲೂ ನಾವೇ ಗೆಲ್ಲಬೇಕು,” ಎಂದು ಹೇಳುವ ಮೂಲಕ ಅವರು ಚುನಾವಣೆಯ ರಣಕಹಳೆ ಊದಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ಅಂದರೆ ಕೊನೆಯ ದಿನವಾದ ಶನಿವಾರ ಪ್ರಧಾನಿ ಮೋದಿ ಅವರು ಸಚಿವರು, ಶಾಸಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಪಾರದರ್ಶಕತೆಗೂ ಅವರು ಕರೆ ನೀಡಿದ್ದಾರೆ. ‘‘ನಾವು ನಮ್ಮ ರಾಜಕೀಯ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕವಾಗಿರುವಂತೆ ನೋಡಿ​ಕೊಳ್ಳ​ಬೇಕು,” ಎಂದು ಪ್ರಧಾನಿ ಹೇಳಿದ್ದಾಗಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.
ಬಡವರ ಶಕ್ತಿಗೆ ಮೆಚ್ಚುಗೆ: ‘‘ನೋಟುಗಳ ಅಮಾ​ನ್ಯ​ದಿಂದ ಕೆಲವು ಸಮಸ್ಯೆಗಳು ಎದುರಾದರೂ, ನಮ್ಮ ಕರೆಗೆ ಓಗೊಟ್ಟು ಬೆಂಬಲಿಸಿದ ದೇಶದ ಬಡ ಜನತೆಯ ಆಂತರಿಕ ಶಕ್ತಿಗೆ ನಾನು ಸೆಲ್ಯೂಟ್‌ ಮಾಡುತ್ತೇನೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘‘ಕೆಲವರು ಜೀವನಶೈಲಿಯ ಬಗ್ಗೆ ಚಿಂತೆ​ಗೀಡಾಗಿದ್ದಾರೆ. ಆದರೆ, ನಾನು ದೇಶದ ಬಡವರು ಮತ್ತು ಅವಕಾಶ​ವಂಚಿತರಿಗೆ ಉತ್ತಮ ಗುಣಮಟ್ಟದ ಬದುಕು ರೂಪಿ​ಸಲು ಆದ್ಯತೆ ನೀಡುತ್ತಿದ್ದೇನೆ. ಯಾವಾಗ ಸಮಾಜ​ದಲ್ಲಿ ಅಂತರ್ಗ​ತವಾದ ಒಂದು ಶಕ್ತಿಯಿರು​ತ್ತದೋ, ಆಗ ಎಲ್ಲ ರೀತಿಯ ಕೆಡುಕುಗಳ ವಿರುದ್ಧವೂ ಹೋರಾಡಲು ಸಾಧ್ಯವಾಗು​ತ್ತದೆ,” ಎಂದೂ ಹೇಳಿದ್ದಾರೆ ಮೋದಿ.
ಇದೇ ವೇಳೆ, ನೋಟು ಅಮಾನ್ಯವು ಐತಿಹಾಸಿಕ ನಿರ್ಧಾರ ಎಂಬ ನಿರ್ಣಯವನ್ನು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿದೆ. ಜತೆಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಓಲೈಕೆಯ ರಾಜಕೀಯ ಮಾಡುತ್ತಿದ್ದು, ರಾಜ್ಯದಲ್ಲಿ ಕೋಮು ಹಿಂಸಾಚಾರ ಸೃಷ್ಟಿಸಲು ಯತ್ನಿಸುತ್ತಿ​ದ್ದಾರೆ ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

Comments are closed.