ರಾಷ್ಟ್ರೀಯ

ಛತ್ತೀಸ್ ಘಡ: ಪೊಲೀಸರಿಂದಲೇ 16 ಮಹಿಳೆಯರ ಮೇಲೆ ಅತ್ಯಾಚಾರ!

Pinterest LinkedIn Tumblr


ನವದೆಹಲಿ: ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿರುವಂತೆಯೇ ಇತ್ತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೊಸ ಬಾಂಬ್ ಸಿಡಿಸಿದೆ.
ಕಾಮುಕರಿಂದ ರಕ್ಷಣೆ ನೀಡಬೇಕಾದ ಪೊಲೀಸರೇ ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಛತ್ತೀಸ್ ಘಡದಲ್ಲಿ 16 ಮಹಿಳೆಯರ ಮೇಲೆ ಪೊಲೀಸರೇ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವೆಸಗಿರುವ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸುತ್ತಿದ್ದು, ಛತ್ತೀಸ್ ಘಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೇವಲ ಇದು ಮಾತ್ರವಲ್ಲದೇ ಇನ್ನೂ 20 ಮಂದಿ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳಲು ಆಯೋಗ ಮುಂದಾಗಿದ್ದು, ಮತ್ತಷ್ಟು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಆಯೋಗದ ಮೂಲಗಳ ಪ್ರಕಾರ ಒಟ್ಟು 34 ಪ್ರಕರಣಗಳು ಪೊಲೀಸ್ ದಾಖಲೆಗಳಲ್ಲಿ ದಾಖಲಾಗಿದ್ದು, ಈ ಪೈಕಿ 15 ಮಂದಿ ಸಂತ್ರಸ್ಥರು ಹೇಳಿಕೆ ದಾಖಲಿಸಿದ್ದಾರೆ. ಉಳಿದ 19 ಮಂದಿ ಸಂತ್ರಸ್ಥ ಮಹಿಳೆಯ ಹೇಳಿಕೆ ದಾಖಲಾಗಬೇಕಿದೆ. ಸ್ವತಃ ಮಾನವ ಹಕ್ಕು ಆಯೋಗದ ಅಧಿಕಾರಿಗಳು 34 ಮಂದಿ ಸಂತ್ರಸ್ಥ ಮಹಿಳೆಯರ ಪೈಕಿ 14 ಮಂದಿ ಸಂತ್ರಸ್ತರ ಹೇಳಿಕೆ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವಂತೆ ಆಯೋಗ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಿಂಗಳೊಳಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರಿಗೆ ಹೇಳಿಕೆಗಳ ದಾಖಲೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಛತ್ತೀಸ್ ಘಡದ ಬಿಜಾಪುರ್ ಜಿಲ್ಲೆಯ ಐದು ಹಳ್ಳಿಗಳ ಮಹಿಳೆಯರ ಮೇಲೆ ಸ್ಥಳೀಯ ಪೊಲೀಸರು ಲೈಂಗಿಕ ದೌರ್ಜನ್ಯವೆಸಗಿರುವ ಕುರಿತು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಆಯೋಗ ತನಿಖೆಗೆ ಮುಂದಾಗಿದೆ. ಅಂತೆಯೇ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆಯೂ ದೂರು ಬಂದಿದ್ದು, ಈ ಕುರಿತು ತನಿಖೆಗೆ ಮುಂದಾಗಬೇಕು ಎಂದು ಆಯೋಗ ಸರ್ಕಾರಕ್ಕೆ ಸೂಚನೆ ನೀಡಿದೆ. ಅಂತೆಯೇ ಬುಡಕಟ್ಟು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯವಾಗುತ್ತಿದ್ದರೂ ಛತ್ತೀಸ್ ಘಡ ಸರ್ಕಾರ ಕೈಕಟ್ಟಿ ಕೂತಿರುವ ಬಗ್ಗೆ ಆಯೋಗ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಮಧ್ಯಂತರ ಪರಿಹಾರಕ್ಕೆ ಸರ್ಕಾರ ಬ್ರೇಕ್; ನಿರ್ಧಾರ ಪ್ರಶ್ನಿಸಿದ ಆಯೋಗ
ಇದೇ ವೇಳೆ ಸಂತ್ರಸ್ಥ ಮಹಿಳೆಯರಿಗೆ ನೀಡಬೇಕು ಎಂದು ಉದ್ದೇಶಿಸಿದ್ದ ಮದ್ಯಂತರ ಪರಿಹಾರ ಧನ 37 ಲಕ್ಷ ರು.ಗಳ ಬಿಡುಗಡೆಗೆ ತಡೆ ನೀಡಿರುವ ಸರ್ಕಾರದ ಕ್ರಮವನ್ನು ಆಯೋಗ ಪ್ರಶ್ನಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದೆ. ದೌರ್ಜನ್ಯಕ್ಕೊಳಗಾದ 8 ಮಂದಿಗೆ ತಲಾ 3 ಲಕ್ಷ ರು., ಲೈಂಗಿಕ ದೌರ್ಜನ್ಯಕ್ಕೊಳಗಾದ 6 ಮಂದಿ ಮಹಿಳೆಯರಿಗೆ ತಲಾ 2 ಲಕ್ಷ ರು., ದೈಹಿಕ ಹಿಂಸಾಚಾರಕ್ಕೊಳಗಾದ ಇಬ್ಬರು ಮಹಿಳೆಯರಿಗೆ ತಲಾ 50 ಸಾವಿರ ರು. ನೀಡುವ ಕುರಿತು ಈ ಹಿಂದೆ ಸರ್ಕಾರ ನಿರ್ಧರಿಸಿತ್ತು. ಆದರೆ ಈ ವರೆಗೂ ಈ ಪರಿಹಾರ ಧನ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರವೇ ಪರಿಹಾರ ಬಿಡುಗಡೆಗೆ ಬ್ರೇಕ್ ಹಾಕಿದೆ ಎಂದು ಆರೋಪಿಸಿದೆ.

Comments are closed.