ರಾಷ್ಟ್ರೀಯ

ಭೀಮ್ ಆ್ಯಪ್ ನಂತರ ಆಧಾರ್ ಪೇ ಆ್ಯಪ್ ಬಿಡುಗಡೆ?

Pinterest LinkedIn Tumblr


ನವದೆಹಲಿ(ಜ. 16): ಭೀಮ್ ಆ್ಯಪ್ ಬಿಡುಗಡೆಯಾಗಿ ಲಕ್ಷಾಂತರ ಡೌನ್’ಲೋಡ್’ಗಳು ಆದ ಬೆನ್ನಲ್ಲೇ ಕೇಂದ್ರ ಸರಕಾರ ಮತ್ತೊಂದು ಆ್ಯಪನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ. ಆಧಾರ್ ಕಾರ್ಡ್ ಮೂಲಕ ಹಣ ಪಾವತಿ ಮಾಡುವ “ಆಧಾರ್ ಪೇ” ಆ್ಯಪ್ ಇನ್ನು ಕೆಲ ವಾರಗಳಲ್ಲಿ ಮಾರುಕಟ್ಟೆಗೆ ಬರಲಿದೆ. ನಿಮ್ಮ ಬೆರಳ ಮುದ್ರೆ (ಬಯೋಮೆಟ್ರಿಕ್ಸ್) ಮೂಲಕ ನೀವು ಹಣದ ವಹಿವಾಟು ನಡೆಸಲು ಅವಕಾಶವಿದೆ.
ಏನಿದು ಆಧಾರ್ ಪೇ?
* ಇದು ವರ್ತಕರಿಗೆಂದು ಇರುವ ಆ್ಯಪ್ ಆಗಿದೆ.
* ನಿಮ್ಮ ಆಧಾರ್ ಕಾರ್ಡ್’ನಲ್ಲಿರುವ ಫಿಂಗರ್’ಪ್ರಿಂಟ್’ಗೆ ನಿಮ್ಮ ಬೆರಳ ಮುದ್ರೆ ಮ್ಯಾಚ್ ಆಗಬೇಕು.
* ಆಧಾರ್ ಕಾರ್ಡ್’ಗೆ ಲಿಂಕ್ ಇರುವ ಬ್ಯಾಂಕ್ ಅಕೌಂಟ್’ಗಳನ್ನಷ್ಟೇ ಈ ಆಧಾರ್ ಪೇ ಆ್ಯಪ್’ನಲ್ಲಿ ಬಳಸಲು ಸಾಧ್ಯ.
* ಜನರಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಸ್ಮಾರ್ಟ್’ಫೋನ್’ನ ಅಗತ್ಯ ಬೀಳುವುದಿಲ್ಲ.
* ಕಾಲಾನಂತರದಲ್ಲಿ ಭೀಮ್ ಆ್ಯಪ್ ಜೊತೆ ಆಧಾರ್ ಪೇ ಸೇರ್ಪಡೆ.
ಗ್ರಾಮೀಣ ಭಾಗದಲ್ಲಿ ಕೆಲ ಬ್ಯಾಂಕ್ ವ್ಯವಹಾರಗಳಲ್ಲಿ ಮೈಕ್ರೋ ಎಟಿಎಂನಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಇಪಿಎಸ್) ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಆಧಾರ್ ಪೇ ರೂಪುಗೊಳ್ಳುತ್ತಿದೆ ಎಂದು ಆಧಾರ್ ಸಂಸ್ಥೆಯ (ಯುಐಡಿಎಐ) ಸಿಇಓ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ. ಆಂಧ್ರದ ಕೆಲ ಮಳಿಗೆಗಳಲ್ಲಿ ಈಗಾಗಲೇ ಆಧಾರ್ ಪೇ ಆ್ಯಪ್’ನ ಪ್ರಯೋಗ ನಡೆಸಲಾಗುತ್ತಿದೆ. ಫಲಿತಾಂಶ ಕೂಡ ಉತ್ತೇಜನಕಾರಿಯಾಗಿದೆ ಎಂದವರು ಹೇಳುತ್ತಾರೆ.
ಭದ್ರತೆಯ ಭಯ:
ಆಧಾರ್ ಪ್ರಾಜೆಕ್ಟನ್ನು ಆರು ವರ್ಷಗಳಿಂದ ಗಮನಿಸುತ್ತಾ ಬಂದಿರುವ “ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ” ಸಂಸ್ಥೆಯ ಕಾರ್ಯವಾಹಕ ನಿರ್ದೇಶಕ ಸುನೀಲ್ ಅಬ್ರಹಾಂ ಹಾಗೂ “ಪೇಯು ಇಂಡಿಯಾ” ಸಂಸ್ಥೆಯ ಸಿಇಓ ಅಮರೀಶ್ ರಾವು ಅವರು ಈ ಕೆಳಗಿನ ಕಳವಳಗಳನ್ನ ವ್ಯಕ್ತಪಡಿಸುತ್ತಾರೆ.
* ಬಯೋಮೆಟ್ರಿಕ್’ನಲ್ಲಿ ದೋಷದ ಸಾಧ್ಯತೆ ಹೆಚ್ಚೇ ಇರುತ್ತದೆ.
* ಮೇಣವನ್ನು ಉಪಯೋಗಿಸಿ ಫಿಂಗರ್ ಪ್ರಿಂಟನ್ನು ಸುಲಭವಾಗಿ ನಕಲಿ ಮಾಡಬಹುದು.
* ಸ್ಮಾರ್ಟ್’ಕಾರ್ಡನ್ನು ನಕಲಿ ಮಾಡುವುದಕ್ಕಿಂತ ಬಯೋಮೆಟ್ರಿಕ್’ನ್ನು ನಕಲಿ ಮಾಡುವುದು ಕಡಿಮೆ ವೆಚ್ಚ.
* ಸ್ಮಾರ್ಟ್ ಕಾರ್ಡ್’ಗಿಂತ ಬಯೋಮೆಟ್ರಿಕ್ ವ್ಯವಸ್ಥೆ ಹೆಚ್ಚು ದುಬಾರಿ
* ಸ್ಮಾರ್ಟ್’ಕಾರ್ಡ್ ಹ್ಯಾಕ್ ಆದರೆ ಪಿನ್ ನಂಬರ್ ಬದಲಿಸುವ ಅವಕಾಶವಿರುತ್ತದೆ. ಆದರೆ, ಬಯೋಮೆಟ್ರಕ್ ನಕಲಿಯಾದರೆ ಅದನ್ನು ಬದಲಿಸಲು ಆಗುವುದೇ ಇಲ್ಲ.
* ಭ್ರಷ್ಟ ಬ್ಯಾಂಕ್ ಅಧಿಕಾರಿಗಳ ಕೈಗೆ ಬಯೋಮೆಟ್ರಿಕ್ಸ್ ವಿವರ ಸಿಕ್ಕಿಬಿಟ್ಟರೆ ದೊಡ್ಡ ಅಪಾಯವಿರುತ್ತದೆ.
* ಸದ್ಯ ದೇಶದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಗೆ ಬೇಕಾದ ಬ್ಯಾಂಡ್ ವಿಡ್ತ್ ಮತ್ತು ಡೇಟಾ ಅವಕಾಶವಿಲ್ಲ.
* ಬಯೋಮೆಟ್ರಿಕ್ ವ್ಯವಸ್ಥೆ ಸದ್ಯಕ್ಕಂತೂ ಜಾರಿ ಸಾಧ್ಯವಿಲ್ಲ; ಆರೇಳು ವರ್ಷಗಳಾದರೂ ಬೇಕಾಗಬಹುದು.
ಆಧಾರ್ ಸಂಸ್ಥೆ ಏನು ಹೇಳುತ್ತದೆ?
ಕಾರ್ಡ್ ಆದರೂ ಆಗಲಿ, ಮೊಬೈಲ್ ವ್ಯಾಲೆಟ್ ಆಗಲಿ, ಆಧಾರ್ ಪೇ ಆಗಲಿ, ಯಾವುದೇ ಇರಲಿ, ಎಲ್ಲಾ ರೀತಿಯ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳ ಮೂಲಕ ಲೆಸ್ ಕ್ಯಾಷ್ ವಾತಾವರಣ ನಿರ್ಮಾಣವಾಗುವುದು ಮುಖ್ಯ ಎಂದು ಆಧಾರ್ ಸಂಸ್ಥೆ ಸಿಇಓ ಅಜಯ್ ಭೂಷಣ್ ಪಾಂಡೆ ಸ್ಪಷ್ಟಪಡಿಸುತ್ತಾರೆ.
(ಮಾಹಿತಿ: ಇಂದುಲೇಖಾ ಅರವಿಂದ್, ಎಕನಾಮಿಕ್ ಟೈಮ್ಸ್)

Comments are closed.