ರಾಷ್ಟ್ರೀಯ

ಇಲ್ಲಿ ದಲಿತರಿಗೆ ಹೋಟೆಲ್‍ನಲ್ಲಿ ನೀರು ಕೊಡುವುದಿಲ್ಲ; ತಲೆಕೂದಲು ಕತ್ತರಿಸಲು ಕ್ಷೌರಿಕನೂ ನಿರಾಕರಿಸುತ್ತಾನೆ!

Pinterest LinkedIn Tumblr


ಭೋಪಾಲ್: ನಾವು ತಲೆಕೂದಲು ಕತ್ತರಿಸಲೆಂದು ಕ್ಷೌರಿಕನ ಬಳಿ ಹೋದರೆ ಕೂದಲು ಕತ್ತರಿಸಲು ಆತ ನಿರಾಕರಿಸುತ್ತಾನೆ. ಹೋಟೆಲ್‌ನಲ್ಲಿ ನಮಗೆ ನೀರು ಕೂಡಾ ಕೊಡುವುದಿಲ್ಲ ಎಂದು ಮಧ್ಯಪ್ರದೇಶದ ದಲಿತ ಕುಟುಂಬವೊಂದು ಅಸ್ಪೃಶ್ಯತೆಯ ವಿರುದ್ಧ ದೂರು ನೀಡಿದೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ನೈಸಾಮಂದ್ ಗ್ರಾಮದ ನಿವಾಸಿ ಜಗನ್ನಾಥ್ ಅಹಿರ್‍ವಾರ್ ಎಂಬಾತ ಆ ಊರಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆಯ ಬಗ್ಗೆ ಹೇಳಿದ್ದಾರೆ.

ಇಲ್ಲಿನ ಗ್ರಾಮದಲ್ಲಿ ಸುಮಾರು 70 ದಲಿತ ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮದ ಜನಸಂಖ್ಯೆ 1800 ಇದೆ. ಮೇಲ್ಜಾತಿವರು ಕುಳಿತುಕೊಳ್ಳುವ ಕುರ್ಚಿಯಲ್ಲಿ ನೀವು ಕುಳಿತುಕೊಳ್ಳಬಾರದು. ಅವರ ಕೂದಲು ಕತ್ತರಿಸುವ ಕತ್ತರಿಯನ್ನಾಗಲೀ, ರೇಜರ್ ಆಗಲೀ ನಿಮಗೆ ಬಳಸಲು ಸಾಧ್ಯವಿಲ್ಲ ಎಂದು ಕ್ಷೌರಿಕ ನಮ್ಮನ್ನು ದೂರವಿಟ್ಟಿದ್ದಾನೆ. ಹೋಟೆಲ್‍ನಲ್ಲಿ ನಮಗೆ ಲೋಟದಲ್ಲಿ ನೀರು ಕೊಡುವುದಿಲ್ಲ. ದಲಿತರು ಎಂಬ ಕಾರಣದಿಂದ ನಮ್ಮನ್ನು ಸಮಾಜ ದೂರವಿಟ್ಟಿದೆ.

ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಇಂಥದ್ದೇ ಸಮಸ್ಯೆ ಬಗ್ಗೆ ಆಡಳಿತಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರು ದಾಖಲಾದ ನಂತರ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳು ದಲಿತ ಕುಟುಂಬದೊಂದಿಗೆ ‘ಸಹಭೋಜನ’ ಏರ್ಪಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು.

ಈ ಬಗ್ಗೆ ಆಡಳಿತಾಧಿಕಾರಿಗಳಲ್ಲಿ ವಿಚಾರಿಸಿದಾಗ, ರಾಜಕೀಯ ದ್ವೇಷದಿಂದಲೇ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ, ನಾವು ಈ ಗ್ರಾಮದಲ್ಲಿ ಸಹಭೋಜನ ಏರ್ಪಡಿಸಿದ್ದು ಎಲ್ಲ ಜಾತಿಯವರು ಅದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಜನರು ಶಾಂತಿಯಿಂದ ಬದುಕುತ್ತಿದ್ದಾರೆ ಎಂದು ಬೆರಾಸಿಯಾದ ಸಬ್ ಡಿವಿಷನಲ್ ಮೆಜಿಸ್ಟ್ರೇಟ್ ರಾಜೀವ್ ನಂದನ್ ಶ್ರೀವಾಸ್ತವ ಹೇಳಿದ್ದಾರೆ.

ಇಲ್ಲಿ ಜಾತಿ ಆಧಾರಿಸಿ ಭೇದಭಾವಗಳನ್ನು ಮಾಡಲಾಗುವುದಿಲ್ಲ. ಯಾವುದೋ ವೈಯಕ್ತಿಕ ದ್ವೇಷದಿಂದ ಈ ರೀತಿ ಆರೋಪ ಮಾಡಲಾಗಿದೆ ಎಂದು ರಾಜೀವ್ ಹೇಳಿದ್ದಾರೆ.

ಆದರೆ ಜಿಲ್ಲಾಧಿಕಾರಿ ಮತ್ತು ಎಸ್‍ಡಿಎಂ ನಮ್ಮ ದೂರನ್ನು ಕಡೆಗಣಿಸಿದ್ದಾರೆ .ಕಳೆದ ಮೂರು ತಿಂಗಳಿನಿಂದ ಇಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ. ಈ ಬಗ್ಗೆ ನಾವು ಸ್ಥಳೀಯ ಶಾಸಕ ವಿಷ್ಣು ಖಾಟ್ರಿ ಅವರಿಗೆ ನವೆಂಬರ್ ತಿಂಗಳಲ್ಲಿ ದೂರು ನೀಡಿದ್ದರೂ, ಅವರು ಇದರತ್ತ ಗಮನ ಹರಿಸಿಲ್ಲ ಎಂದು ಅಹಿರ್‍ವಾರ್ ಹೇಳಿದ್ದಾರೆ.

ಈ ಬಗ್ಗೆ ಖಾಟ್ರಿ ಅವರಲ್ಲಿ ವಿಚಾರಿಸಿಗಾಗ, ಕೆಲವು ರಾಜಕೀಯ ಪಕ್ಷಗಳು ಈ ಕುಟುಂಬದವರೊಂದಿಗೆ ಸೇರಿ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ನಾವು ಆ ಗ್ರಾಮಕ್ಕೆ ಭೇಟಿ ನೀಡಿದಾಗ ಅಂಥಾ ಯಾವುದೇ ತಾರತಮ್ಯ ನಮಗೆ ಕಂಡು ಬಂದಿಲ್ಲ. ಈ ಆರೋಪಗಳೆಲ್ಲ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.

Comments are closed.