ರಾಷ್ಟ್ರೀಯ

ತಮಿಳುನಾಡು: ಗೋಲ್ಡನ್ ಬೆ ರೆಸಾರ್ಟ್ ಹೊರಗೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಭದ್ರತಾ ಸಿಬ್ಬಂದಿಗಳು

Pinterest LinkedIn Tumblr

ಚೆನ್ನೈ: ಎಐಎಡಿಎಂಕೆ ಶಾಸಕರು ಉಳಿದುಕೊಂಡಿದ್ದ ಗೋಲ್ಡನ್ ಬೆ ರೆಸಾರ್ಟ್ ಸಮೀಪ ಜಮಾಯಿಸಿದ್ದ ಪತ್ರಕರ್ತರ ಮೇಲೆ ಶಾಸಕರನ್ನು ಕಾಯುತ್ತಿರುವ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಕೆಲವು ಪತ್ರಕರ್ತರ ಕ್ಯಾಮರಾ ಮತ್ತು ಮೊಬೈಲ್ ಫೋನ್ ಗಳನ್ನು ಕೂಡ ಕಿತ್ತುಕೊಂಡಿದ್ದಾರೆ ಎಂದು ಪತ್ರಕರ್ತರು ತಿಳಿಸಿದ್ದಾರೆ.

ಮದ್ರಾಸ್ ಪತ್ರಕರ್ತರ ಸಂಘ ಮತ್ತು ತಮಿಳುನಾಡು ಪತ್ರಕರ್ತರ ಸಂಘಟನೆ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಘಟನೆಯನ್ನು ಖಂಡಿಸಿದ್ದಾರೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು, ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ 127 ಮಂದಿ ಶಾಸಕರನ್ನುದ್ದೇಶಿಸಿ ಮಾತನಾಡಲಿದ್ದರು. ಅವರು ರೆಸಾರ್ಟ್ ಗೆ ಬರುವ ಹಿನ್ನೆಲೆಯಲ್ಲಿ ಟಿವಿ ಮತ್ತು ಪತ್ರಿಕಾ ಮಾಧ್ಯಮದವರು ರೆಸಾರ್ಟ್ ಹೊರಗೆ ಸೇರಿದ್ದರು.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಶಾಸಕರನ್ನು ಕಾಯುತ್ತಿರು ಭದ್ರತಾ ಸಿಬ್ಬಂದಿ ಪಕ್ಕದ ಗ್ರಾಮಕ್ಕೆ ತೆರಳುವ ಸಾರ್ವಜನಿಕ ರಸ್ತೆಯನ್ನು ಬ್ಲಾಕ್ ಮಾಡಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಎಂ.ಕೆ.ಸ್ಟಾಲಿನ್, ಶಶಿಕಲಾ ಬಣದ ಎಐಎಡಿಎಂಕೆ ಕಾರ್ಯಕರ್ತರು ದುಷ್ಕೃತ್ಯಗಳನ್ನು ನಡೆಸುತ್ತಿದ್ದರೂ ಕೂಡ ಪೊಲೀಸರು ಏಕೆ ಸುಮ್ಮನೆ ಕುಳಿತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶಶಿಕಲಾ ಬಣದವರು ನಡೆಸಿದ ಪತ್ರಕರ್ತರ ಮೇಲಿನ ಹಲ್ಲೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

Comments are closed.