ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಸಮಾಜವಾದಿ ಪಕ್ಷದ ಶಾಸಕರೊಬ್ಬರ ಮೇಲಿರುವ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪದ ಬಗ್ಗೆ ಇಬ್ಬರು ನಾಯಕರು ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದೆ.
ಅಖಿಲೇಶ್ ಯಾದವ್ ಅವರ ನೇತೃತ್ವದ ಸರ್ಕಾರ ಕೊಲೆ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಕರಣ ಸಂಬಂಧ ಇರುವ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸುವುದಕ್ಕಿಂದ ಹೆಚ್ಚಾಗಿ ಅವುಗಳನ್ನು ಮುಚ್ಚಿಹಾಕುವುದರಲ್ಲೇ ಪೊಲೀಸರು ತೊಡಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಆರೋಪ ಮಾಡಿದ್ದಾರೆ.
ಅತ್ಯಾಚಾರ ಪ್ರಕರಣ ಹಾಗೂ ಕೊಲೆ ಆರೋಪ ಹೊತ್ತಿರುವವರನ್ನು ಅಖಿಲೇಶ್ ಯಾದವ್ ರಕ್ಷಿಸುತ್ತಾ ಬಂದಿದ್ದಾರೆ. ಆರೋಪಿ ಸ್ಥಾನಲ್ಲಿರುವ ಹಾಲಿ ಶಾಸಕ ಹಾಗೂ ಪ್ರಸ್ತುತ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಅರುಣ್ ವರ್ಮಾ ಕಣದಲ್ಲಿದ್ದಾರೆ. ಈ ಕುರಿತು ಅಖಿಲೇಶ್ ಹಾಗೂ ರಾಹುಲ್ ಗಾಂಧಿ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಕರಣ ವಿವರ: ಕೊಲೆಯಾಗಿರುವ 22 ವರ್ಷದ ಮಹಿಳೆಯು ಸಮಾಜವಾದಿ ಪಕ್ಷದ ಶಾಸಕ ಅರುಣ್ ವರ್ಮಾ ಹಾಗೂ ಮತ್ತೊಬ್ಬರ ವಿರುದ್ಧ 2013ರಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿದ್ದ ಮಹಿಳೆಯನ್ನು ಹಿಂದಿನ ಶನಿವಾರ ಅಪಹರಿಸಲಾಗಿತ್ತು. ಭಾನುವಾರ ಸುಲ್ತಾನ್‌ಪುರದ ಜೈಸಿಂಗ್‌ಪುರದ ಶಾಲೆಯ ಬಳಿ ಅವರ ಶವ ಪತ್ತೆಯಾಗಿತ್ತು.
ಮಹಿಳೆ ದೇಹದ ಮೇಲೆ ಗಾಯಗಳಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.