ರಾಷ್ಟ್ರೀಯ

ಚಲನಚಿತ್ರದಲ್ಲಿ ರಾಷ್ಟ್ರಗೀತೆ ಪ್ರಸಾರವಾದರೆ ವೀಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ಚಲನಚಿತ್ರ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾಗುವಾಗ ವೀಕ್ಷಕರು ಎದ್ದುನಿಲ್ಲುವ ಅವಶ್ಯಕತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ದೇಶಾದ್ಯಂತ ಇರುವ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೆಲ ತಿಂಗಳ ಹಿಂದೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಈ ಸ್ಪಷ್ಟನೆ ನೀಡಿದೆ. ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಸಭಾಂಗಣದಲ್ಲಿರುವ ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದು ಕೂಡ ಹೇಳಿತ್ತು.

ಇಂದು ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡುವಾಗ ರಾಷ್ಟ್ರಧ್ವಜವನ್ನು ಪರದೆ ಮೇಲೆ ತೋರಿಸಬೇಕು, ಇಡೀ ರಾಷ್ಟ್ರಗೀತೆಯನ್ನು ಚಲನಚಿತ್ರ ಆರಂಭಕ್ಕೆ ಮುನ್ನ ಪ್ರಸಾರ ಮಾಡಬೇಕು ಮತ್ತು ರಾಷ್ಟ್ರಗೀತೆಯನ್ನು ಚಲನಚಿತ್ರದ ಮಧ್ಯದಲ್ಲಿ ಯಾವುದೇ ವಾಣಿಜ್ಯ ಉಪಯೋಗಕ್ಕೆ ಪ್ರಸಾರ ಮಾಡಬಾರದು. ಜನರು ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡುವ ಅಗತ್ಯವಿಲ್ಲ ಎಂದು ಕೂಡ ಹೇಳಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಅವರಿದ್ದ ನ್ಯಾಯಪೀಠ, ಜನರಿಗೆ ಇದು ನನ್ನ ದೇಶ, ನನ್ನ ತಾಯ್ನಾಡು ಎಂಬ ಭಾವನೆ ಮೂಡಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದೆ. ರಾಷ್ಟ್ರಗೀತೆಗೆ ಗೌರವ ನೀಡುವುದೆಂದರೆ ರಾಷ್ಟ್ರದ ಗುರುತು, ಐಕ್ಯತೆ ಮತ್ತು ಸಾಂವಿಧಾನಿಕ ದೇಶಭಕ್ತಿಗೆ ಗೌರವ ನೀಡಿದಂತೆ ಎಂದು ನ್ಯಾಯಪೀಠ ಹೇಳಿದೆ.

ಈ ಆದೇಶವನ್ನು ಇನ್ನೊಂದು ವಾರದಲ್ಲಿ ಜಾರಿಗೆ ತಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಹಂಚಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ರಾಷ್ಟ್ರಗೀತೆಯನ್ನು ವಾಣಿಜ್ಯ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿರುವ ನ್ಯಾಯಾಲಯ ಇದರಲ್ಲಿ ನಾಟಕೀಯತೆ ಪ್ರದರ್ಶಿಸಬಾರದು. ಅನಪೇಕ್ಷಿತ ವಸ್ತುಗಳ ಮೂಲಕ ರಾಷ್ಟ್ರಗೀತೆಯನ್ನು ಮುದ್ರಿಸುವುದಾಗಲಿ, ಪ್ರದರ್ಶಿಸುವುದಾಗಲಿ ಮಾಡಬಾರದು.

ನ್ಯಾಯಾಲಯದ ಆದೇಶವನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

Comments are closed.