ರಾಷ್ಟ್ರೀಯ

ಮಾಣಿಕ್‌ಚಂದ್ ಗುಟ್ಕಾ ಸಂಸ್ಥೆ ಮಾಲೀಕ ಕ್ಯಾನ್ಸರ್ ನಿಂದ ಸಾವು

Pinterest LinkedIn Tumblr

ಪೂನಾ: ಮಾಣಿಕ್‌ಚಂದ್ ಗುಟ್ಕಾ ಸಂಸ್ಥೆಯ ಮಾಲೀಕರಾದ ರಸಿಕ್‌ಲಾಲ್ ಮಾಣಿಕ್‌ಚಂದ್ ಧರಿವಾಲ್ (78) ಅವರು ಪೂನಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಸಿಕ್‌ಲಾಲ್ ಸೆ.4 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಮಗ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ‘ಬಹು ಅಂಗಾಂಗ ವೈಪಲ್ಯದಿಂದ ರಸಿಕ್‌ಲಾಲ್ ಮೃತಪಟ್ಟಿದ್ದಾರೆ’ ಎನ್ನುವುದಾಗಿ ವೈದ್ಯರು ಹೇಳಿದರು.

ರಸಿಕ್‌ಲಾಲ್ ಮಾಣಿಕ್‌ಚಂದ್ ಧರಿವಾಲ್ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರಿನಲ್ಲಿ ಜನಿಸಿದ್ದರು. ತಂದೆಯವರಿಂದ 20 ಬೀಡಿ ಕಾರ್ಖಾನೆಗಳನ್ನು ಪಡೆದಿದ್ದ ಧರಿವಾಲ್ ಗುಟ್ಕಾ ವ್ಯವಹಾರದಿಂದ ಖ್ಯಾತರಾಗಿದ್ದರು.

ವರ್ಷಗಳ ಹಿಂದೆ ಮಹಾರಾಷ್ಟರದಲ್ಲಿ ಗುಟ್ಕಾ ನಿಷೇಧ ಮಾಡಿದ್ದ ಕಾರಣ ಧರಿವಾಲ್ ಪ್ಯಾಕೇಜಿಂಗ್, ರೋಲರ್ ಹಿಲ್ ಗಿರಣಿ, ರಿಯಲ್ ಎಸ್ಟೇಟ್, ಪವನ ಶಕ್ತಿ, ಪ್ಯಾಕ್ಡ್ ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಧರಿವಾಲ್ , ರಸಿಕ್‌ಲಾಲ್ ಎಂ ಧರಿವಾಲ್ ಫೌಂಡೇಶನ್ ಮೂಲಕ, ಆರೋಗ್ಯ, ಪರಿಸರ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಪಾರ ಧನ ಸಹಾಯವನ್ನು ಮಾಡಿದ್ದರು.

Comments are closed.