ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‍ನಲ್ಲಿ ಮೂರು ಅಧಿಕಾರಿಗಳನ್ನು ಹನಿಟ್ರ್ಯಾಪ್ ನಲ್ಲಿ ಸಿಲುಕಿಸಿ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಲು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಆ ಅಧಿಕಾರಿಗಳನ್ನು ಭಾರತಕ್ಕೆ ವಾಪಸ್ ಕರೆದುಕೊಳ್ಳಲಾಗಿದೆಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಅಧಿಕಾರಿಗಳ ಹೆಸರನ್ನು ಸದ್ಯ ಬಹಿರಂಗ ಪಡಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಸೂಕ್ಷ್ಯ ಮಾಹಿತಿಗಳನ್ನು ಸೋರಿಕೆ ಮಾಡಲು ಐಎಸ್‍ಐ ಯತ್ನಿಸುತ್ತಿದೆ ಎಂಬ ಮಾಹಿತಿ ಭಾರತಕ್ಕೆ ಸಿಕ್ಕಿರುವುದರಿಂದ ಐಎಸ್‍ಐಯ ಈ ತಂತ್ರ ವಿಫಲವಾಗಿದೆ. ಭಾರತಕ್ಕೆ ವಾಪಸ್ ಕರೆದಿರುವ ಈ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಇವರೆಲ್ಲರೂ ತನಿಖೆಗೆ ಸಹಕರಿಸುತ್ತಿದ್ದಾರೆ. ಆದರೆ ಇವರನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಮಹಿಳೆಯರನ್ನು ಕಳಿಸಿ ಅಧಿಕಾರಿಗಳನ್ನು ಸೆಳೆದು ಅವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯಗಳನ್ನು ಹನಿಟ್ರ್ಯಾಪ್ ನಲ್ಲಿ ಮಾಡಲಾಗುತ್ತಿದೆ. ಇದೇ ರೀತಿಯ ಯತ್ನಗಳೂ ಇಲ್ಲಿ ನಡೆದಿತ್ತು. ಈ ಮೂವರು ಅಧಿಕಾರಿಗಳು ಈ ತಂತ್ರದ ಬಗ್ಗೆ ಎಚ್ಚೆತ್ತು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ಹೇಳಲಾಗಿದೆ.
2010ರಲ್ಲಿ ಭಾರತೀಯ ಹೈಕಮಿಷನ್ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಧುರಿ ಗುಪ್ತಾ ಎಂಬಾಕೆ ಭಾರತ ಅಫ್ಘಾನಿಸ್ತಾನದಲ್ಲಿ ಮಾಡುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ವಿಚಾರದಲ್ಲಿ ಬಂಧಿಸಲಾಗಿತ್ತು.
Comments are closed.