ಹೊಸದಿಲ್ಲಿ: ತಾವು ಸಂಪರ್ಕ ಖಾತೆ ಸಚಿವರಾಗಿದ್ದಾಗ ಫೇಸ್‌ಬುಕ್‌ನ ಫ್ರೀ ಬೇಸಿಕ್ಸ್ ವೇದಿಕೆಗೆ ಅನುಮತಿ ನಿರಾಕರಿಸಿದ್ದಾಗಿ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
‘ಇಂಟರ್‌ನೆಟ್‌ಗೆ ಪ್ರವೇಶ ಪಡೆಯುವ ಹಕ್ಕನ್ನು ನಿರಾಕರಿಸಲಾಗದು. ಹೀಗಾಗಿ, ಫೇಸ್‌ಬುಕ್ ತನ್ನ ಫ್ರೀ ಬೇಸಿಕ್ಸ್ ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲು ಹೊರಟಾಗ ನಾನು ಅದನ್ನು ಪರಿಶೀಲಿಸಿದ ಬಳಿಕ ಅನುಮತಿ ನಿರಾಕರಿಸಿದೆ. ಫ್ರೀ ಬೇಸಿಕ್ಸ್ ಹೆಸರಿನಲ್ಲಿ ಫೇಸ್‌ಬುಕ್ ನೀಡಲು ಹೊರಟಿದ್ದ ಉಚಿತ ಇಂಟರ್‌ನೆಟ್ ಸೇವೆ ಯಾವ ರೀತಿ ಇತ್ತೆಂದರೆ, ನಿಮ್ಮ ಗೇಟ್ ಒಳಗೆ ಪ್ರವೇಶಿಸಿದರೆ ಮಾತ್ರ ಉಚಿತ ಎಂಬಂತಿತ್ತು. ಅಂತಹ ಏಕ ಗವಾಕ್ಷಿ ಬಗ್ಗೆ ಭಾರತಕ್ಕೆ ನಂಬಿಕೆಯಿಲ್ಲ. ಹೀಗಾಗಿ ನಾನು ಅದಕ್ಕೆ ಅನುಮತಿ ನೀಡಲಿಲ್ಲ’ ಎಂದು ಡಿಜಿಟಲ್ ಇಂಡಿಯಾ ಶೃಂಗಸಭೆಯಲ್ಲಿ ಪ್ರಸಾದ್ ತಿಳಿಸಿದರು.
‘ನೆಟ್ ನ್ಯೂಟ್ರಾಲಿಟಿ ಬಗ್ಗೆ ಅಮೆರಿಕದ ನಿಲುವನ್ನು ಅಮೆರಿಕವೇ ನಿರ್ಧರಿಸಬೇಕು; ಆದರೆ ‘ನಮ್ಮ ನಿಲುವನ್ನು ಆರಂಭದಲ್ಲೇ ನಾವು ಸ್ಪಷ್ಟಪಡಿಸಿದ್ದೇವೆ. ಯಾವುದೇ ತಾರತಮ್ಯವಿಲ್ಲದೆ ಇಂಟರ್‌ನೆಟ್ ಸಂಪರ್ಕ ಎಲ್ಲರಿಗೂ ಲಭ್ಯವಾಗಬೇಕು ಎಂಬ ನೀತಿಯಲ್ಲಿ ಯಾವುದೇ ರಾಜಿಯಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 2016ರ ಫೆಬ್ರವರಿಯಲ್ಲಿ ರೂಪಿಸಿದ್ದ ಇಂಟರ್‌ನೆಟ್ ಸಂಪರ್ಕ ಕುರಿತ ತಾರತಮ್ಯದ ಬೆಲೆ ಕುರಿತ ನೀತಿಯೇ ಫೇಸ್‌ಬುಕ್‌ನ ಫ್ರೀಬೇಸಿಕ್ ಮತ್ತು ಏರ್‌ಟೆಲ್ ಝೀರೋ ನಿಷೇಧಕ್ಕೆ ಕಾರಣವಾಯಿತು.
ವಿವಿಧ ಡೇಟಾ ಪ್ಯ್ಲಾಟ್‌ಫಾರ್ಮ್‌ಗಳ ಮೂಲಕ ವಿವಿಧ ರೀತಿಯ ದರಗಳಲ್ಲಿ ತಾರತಮ್ಯದ ಬೆಲೆ ಪದ್ಧತಿ ಮೂಲಕ ಇಂಟರ್‌ನೆಟ್ ಸೇವೆ ಒದಗಿಸುವುದನ್ನು ನಿಷೇಧಿಸಿರುವುದಾಗಿ ಟ್ರಾಯ್ ಪ್ರಕಟಿಸಿತ್ತು. ದೂರಸಂಪರ್ಕ ಕಂಪನಿಗಳು ಇಂಟರ್‌ನೆಟ್ ಕಂಪನಿಗಳ ಜತೆ ಸಬ್ಸಿಡಿ ಮೂಲಕ ವೆಬ್‌ಸೈಟ್‌ಗಳ ಸಂಪರ್ಕ ಒದಗಿಸುವ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎಂದು ಟ್ರಾಯ್ ಹೇಳಿತ್ತು.
ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ದಿನಕ್ಕೆ ಕನಿಷ್ಠ 50,000 ರೂ ಹಾಗೂ ಗರಿಷ್ಠ 50 ಲಕ್ಷ ರೂ ವರೆಗೂ ದಂಡ ವಿಧಿಸಲಾಗುವುದು ಎಂದೂ ಎಚ್ಚರಿಕೆ ನೀಡಿತ್ತು.
ಫೇಸ್‌ಬುಕ್ ಕೆಲವು ವೆಬ್‌ಸೈಟ್‌ಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳನ್ನು ತನ್ನ ಫ್ರೀ ಬೇಸಿಕ್ಸ್ ವೇದಿಕೆ ಮೂಲಕ ಉಚಿತವಾಗಿ ನೀಡುತ್ತದೆ.
ನೆಟ್ ನ್ಯೂಟ್ರಾಲಿಟಿ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ದೂರ ಸಂಪರ್ಕ ಇಲಾಖೆ (ಡಿಓಟಿ) ಈ ವಿಷಯವನ್ನು ಪರಿಶೀಲಿಸಿ ಹಲವು ಶಿಫಾರಸುಗಳನ್ನು ಮಾಡಿತು.
ಡಿಓಟಿ ಸಮಿತಿ ಮತ್ತು ಟ್ರಾಯ್ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿದ ಬಳಿಕ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಚಿವ ಪ್ರಸಾದ್ ಅಂದು ಹೇಳಿದ್ದರು.
ಕಳೆದ ತಿಂಗಳು ನೆಟ್ ನ್ಯೂಟ್ರಾಲಿಟಿ ಕುರಿತು ಟ್ರಾಯ್ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿದ್ದು, ಇಂಟರ್‌ನೆಟ್ ಸೇವಾದಾತರು ವೆಬ್ ಸಂಪರ್ಕದಲ್ಲಿ ಯಾವುದೇ ತಾರತಮ್ಯದ ನೀತಿ ಅನುಸರಿಸುವಂತಿಲ್ಲ; ಕೆಲವು ವೆಬ್‌ಸೈಟ್‌ಗಳನ್ನು ಉಚಿತವಾಗಿ ನೀಡುವುದು, ವೆಬ್‌ಸೈಟ್, ಆಪ್‌ಗಳನ್ನು ನಿರ್ಬಂಧಿಸುವುದು ಅಥವಾ ನಿಧಾನಗತಿಯ ಸಂಪರ್ಕ ನೀಡುವುದು- ಇಂತಹ ಪದ್ಧತಿಗಳನ್ನು ಅನುಸರಿಸುವಂತಿಲ್ಲ ಎಂದು ಸಾರಿತ್ತು.
‘ಇಂಟರ್‌ನೆಟ್ ಎಂಬುದು ಮನುಕುಲದ ಅತ್ಯುತ್ತಮ ಸಂಶೋಧನೆಗಳಲ್ಲಿ ಒಂದು ಎಂದು ನನ್ನ ನಂಬಿಕೆ. ಇಂಟರ್‌ನೆಟ್ ಒಂದು ಜಾಗತಿಕ ವೇದಿಕೆಯಾಗಿದ್ದಲ್ಲಿ ಅದು ಸ್ಥಳೀಯ ಸಂಪರ್ಕವನ್ನೂ ಹೊಂದಿರಲೇಬೇಕು’ ಎಂದು ಸಚಿವ ಪ್ರಸಾದ್ ತಿಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ಸರಕಾರ ಐಟಿ, ಐಟಿ ಬೆಂಬಲಿತ ಸೇವೆಗಳು ಮತ್ತು ಪಾಲುದಾರಿಕೆ ಆರ್ಥಿಕತೆ ಸೇರಿದಂತೆ 1 ಸಾವಿರ ಕೋಟಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಸುವ ಗುರಿ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು.
Comments are closed.