ಹೈದರಾಬಾದ್: ಹಗಲು ಹೊತ್ತಿನಲ್ಲಿ ಕಚೇರಿ ಕೆಲಸ, ರಾತ್ರಿ ವೇಳೆ ಕ್ಯಾಬ್ ಡ್ರೈವರ್… ಇದು ಹೈದರಾಬಾದ್‌ನ ಯುವ ಉದ್ಯೋಗಿಗಳ ಹೊಸ ಅವತಾರ. ಇವರ ಪೈಕಿ ಹೆಚ್ಚಿನವರು ಐಟಿ ವಲಯಕ್ಕೆ ಸೇರಿದವರು. ಇತ್ತೀಚಿನ ದಿನಗಳಲ್ಲಿ ಐಟಿ ವಲಯದಲ್ಲಿ ವೇತನ ಕಡಿಮೆಯಾಗುತ್ತಿದ್ದು ತಮ್ಮ ಕಾರುಗಳ ಇಎಂಐ ಕಟ್ಟಲು ಪರದಾಡುತ್ತಿರುವ ಉದ್ಯೋಗಿಗಳು ಅದಕ್ಕಾಗಿ ಈ ಹೊಸ ದಾರಿ ಹಿಡಿದಿದ್ದಾರೆ. ಕೆಲವರು ಓಲಾ ಕ್ಯಾಬ್ ಜತೆ ಒಪ್ಪಂದ ಮಾಡಿಕೊಂಡು ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.
ತಡರಾತ್ರಿಗಳಲ್ಲಿ ಓಡಾಡುವ ಓಲಾ ಕ್ಯಾಬ್‌ಗಳ ಪೈಕಿ ವಿಶೇಷವಾಗಿ ಪ್ರೈಮ್ ಮತ್ತು ಮಿನಿ ಕ್ಯಾಬ್‌ಗಳು ಶೇ 80ರಷ್ಟು ಇಂತಹ ವೃತ್ತಿನಿರತರ ಮಾಲೀಕತ್ವದ ಖಾಸಗಿ ಕಾರುಗಳಾಗಿವೆ. ಓಲಾ ನಿಯಮಗಳ ಪ್ರಕಾರ, ಇಂತಹ ಕಾರುಗಳನ್ನು ಸ್ವತಃ ಮಾಲೀಕರೇ ಓಡಿಸಬೇಕು ಅಥವಾ ತರಬೇತಿ ಪಡೆದ ಚಾಲಕ ಓಡಿಸಬೇಕು. ಹೀಗಾಗಿ ಪ್ರಯಾಣಿಕರಿಗೆ ಹೆಚ್ಚು ಆಯ್ಕೆಗಳು ಲಭ್ಯವಾಗುತ್ತವೆ. ಈ ಮೂಲಕ ಕಾರು ಮಾಲೀಕರು ತಿಂಗಳಿಗೆ 20 ರಿಂದ 40 ಸಾವಿರ ರೂ ಗಳಿಸುತ್ತಾರೆ.
‘ನಾನು ಗಳಿಸುವ ಹೆಚ್ಚುವರಿ 40 ಸಾವಿರ ರೂ ಕಾರಿನ ಇಎಂಐ ಮತ್ತು ನಿರ್ವಹಣೆ ಖರ್ಚಿಗೆ ಸಾಕಾಗುತ್ತದೆ. ಓಲಾ ಜತೆ ಒಪ್ಪಂದ ಮಾಡಿಕೊಂಡಿದ್ದು ಒಳ್ಳೆಯ ನಿರ್ಧಾರ’ ಎನ್ನುತ್ತಾರೆ ಮೆಕ್ಯಾನಿಕಲ್ ಎಂಜಿನಿಯರ್ ರಾಹುಲ್ ಸತ್ಯಾರ್ಥಿ. ಅವರು ಈ ಕೆಲಸಕ್ಕಾಗಿ ಚಾಲಕನೊಬ್ಬನನ್ನು ನೇಮಿಸಿಕೊಂಡಿದ್ದಾರೆ.
ಓಲಾದ ಕಾಯಂ ಚಾಲಕರಂತೆ ರಾತ್ರಿಯಿಡೀ ಓಲಾ ಆಪ್‌ನಲ್ಲಿ ಲಾಗಿನ್ ಆಗಿರುವ ಅಗತ್ಯವಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಲಾಗಿನ್, ಲಾಗೌಟ್ ಆಗುವ ಸ್ವಾತಂತ್ರ್ಯ ಇರುತ್ತದೆ.
‘ನನ್ನ ಮಟ್ಟಿಗೆ ಇದು ಒಳ್ಳೆಯ ವ್ಯವಸ್ಥೆ. ನನ್ನ ಕಾರಿನ ಇಎಂಐ ಕೇವಲ 11,000 ರೂ ಆಗಿರುವುದರಿಂದ ತಿಂಗಳಿಗೆ 20,000 ರೂ ಸಂಪಾದಿಸಿದ ಬಳಿಕ ಓಲಾ ಟ್ರಿಪ್ ಕೊನೆಗೊಳಿಸುತ್ತೇನೆ’ ಎನ್ನುತ್ತಾರೆ ಶಿವಕುಮಾರ್. ಇವರು ತಮ್ಮ ಹೋಂಡಾ ಅಮೇಜ್ ಕಾರನ್ನು ರಾತ್ರಿವೇಳೆ 3ರಿಂದ 5 ಗಂಟೆ ಕಾಲ ಸ್ವತಃ ತಾವೇ ಓಡಿಸುತ್ತಾರೆ.
ಕ್ಯಾಬ್ ಚಾಲಕರಿಗೆ ನಿಗದಿತ ವೇತನವಿಲ್ಲ:
ಈ ವ್ಯವಸ್ಥೆ ಗಟ್ಟಿಯಾಗಿ ಬೇರೂರುತ್ತಿರುವುದನ್ನು ಓಲಾದ ಅಧಿಕೃತ ವಕ್ತಾರರು ಖಚಿತಪಡಿಸಿದ್ದಾರೆ. ‘ಖಾಸಗಿ ಮಾಲೀಕರ ಎಷ್ಟು ಕಾರುಗಳು ಈ ರೀತಿ ನಮ್ಮ ಜತೆ ನೋಂದಾಯಿಸಿಕೊಂಡಿವೆ ಎಂದು ಖಚಿತವಾಗಿ ಹೇಳಲಾಗದು. ದಿನೇ ದಿನೇ ಇಂತಹ ವ್ಯವಸ್ಥೆ ಗಟ್ಟಿಯಾಗುತ್ತಿದ್ದು, ಸುಮಾರು 8 ಲಕ್ಷಕ್ಕೂ ಹೆಚ್ಚು ಕ್ಯಾಬ್‌ಗಳು ಓಲಾದಲ್ಲಿ ನೋಂದಣಿಯಾಗಿವೆ’ ಎಂದು ಅವರು ತಿಳಿಸಿದರು.
ಈ ಕ್ಯಾಬ್ ಚಾಲಕರಿಗೆ ಓಲಾ ಕಂಪನಿಯಿಂದ ಮಾಸಿಕ ನಿಗದಿತ ಮೊತ್ತ ನೀಡುವುದಿಲ್ಲ. ಅವರು ನಡೆಸುವ ಟ್ರಿಪ್ ಆಧರಿಸಿ ಪಾವತಿ ಮಾಡಲಾಗುತ್ತದೆ ಎಂದು ವಕ್ತಾರ ತಿಳಿಸಿದರು.
Comments are closed.