ಲಖನೌ: ಕುರಾನ್ ಮತ್ತು ಸಂವಿಧಾನ ವಿರೋಧಿಯಾಗಿದ್ದರೆ ತ್ರಿವಳಿ ತಲಾಕ್ ಮಸೂದೆಯನ್ನು ಒಪ್ಪಿಕೊಳ್ಳಲಾಗದು ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಹೇಳಿವೆ.
ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾಗಲು ಒಂದು ದಿನ ಬಾಕಿ ಇರುವಾಗ ಮುಸ್ಲಿಂ ಮಹಿಳಾ ಸಂಘಟನೆಗಳು ಈ ಅಭಿಪ್ರಾಯ ವ್ಯಕ್ತಪಡಿಸಿವೆ. ಮಸೂದೆ ಗುರುವಾರ ಮಂಡನೆಯಾಗಲಿದೆ.
ಮದುವೆ ಎಂಬುದು ಒಂದು ಒಪ್ಪಂದ, ಇದನ್ನು ಮುರಿದರೆ ಶಿಕ್ಷಾರ್ಹರು. ಈ ಮಸೂದೆ ಕುರಾನ್ ಮತ್ತು ಸಂವಿಧಾನ ಬದ್ಧವಾಗಿಲ್ಲದಿದ್ದರೆ ಯಾವುದೇ ಮುಸ್ಲಿಂ ಮಹಿಳೆ ಕೂಡ ಒಪ್ಪುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ (ಎಐಎಂ ಡಬ್ಲ್ಯುಪಿಎಲ್‌ಬಿ)ಯ ಅಧ್ಯಕ್ಷೆ ಶೈಷ್ಟಾ ಅಂಬೆರ್ ಹೇಳಿದ್ದಾರೆ.
ಮಂಡಳಿಗೆ ಮಸೂದೆಯ ಕರಡು ತೋರಿಸುವಂತೆ ಕಾನೂನು ಆಯೋಗಕ್ಕೆ ಪತ್ರ ಬರೆಯಾಗಿತ್ತು. ಅಗತ್ಯವಾದಲ್ಲಿ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯೆ ಬಂದಿದ್ದರೂ ಹಾಗೇನು ನಡೆದಿಲ್ಲ ಎಂದು ಶೈಷ್ಟಾ ಹೇಳಿದ್ದಾರೆ.
ಫ್ಯಾಮಿಲಿ ಕೋರ್ಟ್ ಯಾವತ್ತೂ ಕುಟುಂಬ ಉಳಿಸುವ ಅವಕಾಶ ನೀಡುತ್ತದೆ. ಆದರೆ ಉದ್ದೇಶಿತ ಮಸೂದೆಯಲ್ಲಿ ಅಂತ ಅವಕಾಶ ಇಲ್ಲ ಎಂದು ಮುಸ್ಲಿಂ ವಿಮೆನ್ ಲೀಗ್‌ನ ಅಧ್ಯಕ್ಷೆ ನೈಶಾ ಹಸನ್ ಹೇಳಿದ್ದಾರೆ.
ಯಾವುದೇ ಚರ್ಚೆ ಇಲ್ಲದೆ ಮಸೂದೆ ಪಾಸ್ ಮಾಡಿದರೆ ಪ್ರತಿಭಟಿಸುವದಾಗಿ ನೈಶಾ ಹೇಳಿದ್ದಾರೆ. ಪ್ರಸ್ತಾವಿತ ಮಸೂದೆ ಸಂವಿಧಾನದ ನಿಬಂಧನೆ ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆ. ಇದನ್ನು ವಾಪಸ್ ಪಡೆಯಬೇಕು ಎಂದು ಎಐಎಂ ಪಿಎಲ್‌ಬಿ ಈ ಮೊದಲು ಹೇಳಿತ್ತು. ಈ ಮಸೂದೆಯ ಮೂಲಕ ಸರಕಾರ ಪುರುಷರ ವಿಚ್ಛೇದನ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಅದು ಆರೋಪಿಸಿದೆ.
Comments are closed.