ಅನಂತಪುರ: ಅಪ್ರಾಪ್ತ ಬಾಲಕಿಯೊಬ್ಬಳು ಹುಡುಗನಂತೆ ವೇಷ ಧರಿಸಿ ಮೂರು ಹುಡುಗಿಯರನ್ನ ಮದುವೆಯಾಗಿರೋ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಬಿ. ರಮಾದೇವಿ ಮೂವರನ್ನ ಮದುವೆಯಾದ ಅಪ್ರಾಪ್ತೆ. ಮೂರನೇ ಹೆಂಡತಿ ಮಂಗಳವಾರದಂದು ಇಲ್ಲಿನ ಕಡಪಾ ಜಿಲ್ಲೆಯ ಜಮ್ಮಲಮಡುಗುವಿನಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಈಕೆಯ ಹುಡುಗಾಟ ಬಯಲಾಗಿದೆ.
ರಮಾದೇವಿ ಕಾಶಿನಾಯನ ಮಂಡಲ್ನ ಇಟಿಕಲಪಾಡು ಗ್ರಾಮದವಳಾಗಿದ್ದು, ತಮಿಳುನಾಡಿನ ನೂಲುವ ಮಿಲ್ನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ರಮಾದೇವಿ ಯಾವಾಗಲೂ ಹುಡುಗರಂತೆ ಬಟ್ಟೆ ಧರಿಸುತ್ತಿದ್ದಳು. ಪುಲಿವೆಂದುಲಾದಲ್ಲಿ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಮೌನಿಕಾ (ಹೆಸರು ಬದಲಾಯಿಸಲಾಗಿದೆ) ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಪ್ರೀತಿಗೆ ತಿರುಗಿದ್ದು ಎರಡು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ತಾನು ಹುಡುಗಿಯನ್ನ ಮದುವೆಯಾಗಿದ್ದೀನಿ ಎಂದು ಗೊತ್ತಾಗೋಕೆ ಮೌನಿಕಾಗೆ ಎರಡು ತಿಂಗಳು ಬೇಕಾಯ್ತು. ನಂತರ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರ ಮೊರೆ ಹೋಗಿದ್ದಾರೆ.
ರಮಾದೇವಿ ಹುಡುಗನಂತೆ ನಟಿಸಿ ತನಗೆ ವಂಚಿಸಿದ್ದಾಳೆ ಎಂದು ಮೌನಿಕಾ ಪೊಲೀಸರಿಗೆ ಹೇಳಿದ್ದಾಳೆ. ರಮಾದೇವಿ ಈಗಾಗಲೇ ಎರಡು ಬಾರಿ ಹುಡುಗಿಯರ ಜೊತೆ ಮದುವೆಯಾಗಿರುವುದನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಕಡಪಾ ಜಿಲ್ಲೆಯ ಪ್ರೊದತ್ತೂರಿನ 16 ವರ್ಷದ ರೋಜಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಅನಂತಪುರ ಜಿಲ್ಲೆಯ ಮುದಿಗುಬ್ಬಾದ ಕತ್ತಚೆರುವು ಗ್ರಾಮದ ಮಾನಸಾ (ಹೆಸರು ಬದಲಾಯಿಸಲಾಗಿದೆ) ಜೊತೆ ರಮಾದೇವಿ ಮದುವೆ ಮಾಡಿಕೊಂಡಿದ್ದಳು.
ಇಬ್ಬರೂ ಹುಡುಗಿಯರ ಮನಸ್ಥಿತಿ ಸ್ತಿಮಿತದಲ್ಲಿರದ ಕಾರಣ ಅವರನ್ನ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲಿಸರು ಹೇಳಿದ್ದಾರೆ.
Comments are closed.