ಹೊಸದಿಲ್ಲಿ: ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾ ಸರಕಾರ ಮಾಡಿದ್ದನ್ನೇ ತಮ್ಮ ಸರಕಾರ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಕ್ರೆಡಿಟನ್ನು ತಮ್ಮ ಬಗಲಿಗೆ ಹಾಕಿಕೊಳ್ಳುತ್ತಿದ್ದಾರೆ. ಇದರ ಅಗತ್ಯವಿದೆಯೇ? ಎಂದು ಎಐಎಂಐಎಂ ಮುಖ್ಯಸ್ಥ ಅಸಾವುದ್ದಿನ್ ಓವೈಸಿ ಪ್ರಶ್ನಿಸಿದ್ದಾರೆ. ಈ ಮೂಲಕ 45 ವರ್ಷ ಮೇಲ್ಪಟ್ಟ ಮಹಿಳೆಯರು ಸ್ವತಂತ್ರವಾಗಿ ಹಜ್ ಯಾತ್ರೆ ಕೈಗೊಳ್ಳುವ ಅವಕಾಶದ ಪರ ಇರುವ ಬಗ್ಗೆ ಖಚಿತ ಪಡಿಸಿದ್ದಾರೆ.
ನಾಲ್ವರು ಮಹಿಳೆಯರು ಗುಂಪಾಗಿ ಅಥವಾ ಪುರುಷ ಸಂಬಂಧಿಯ ಸಹಾಯದೊಂದಿಗೆ 45 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಮಹಿಳೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವನ್ನು 3 ವರ್ಷಗಳ ಹಿಂದೆ ಸೌದಿ ಅರೇಬಿಯಾ ಸರಕಾರ ನೀಡಿದೆ. ಯಾವುದೇ ರಾಷ್ಟ್ರದ 45 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಹಜ್ ಯಾತ್ರೆ ಕೈಗೊಳ್ಳಬಹುದು. ಮತ್ತೊಂದು ಸರಕಾರ ಮಾಡಿದ ಕಾರ್ಯವನ್ನೇ ತಾನು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಈ ನಿರ್ಣಯ ಕೈಗೊಳ್ಳಲು ಅಧಿಕಾರಕ್ಕೆ ಬಂದ ಮೇಲೆ ಇಷ್ಟು ವರ್ಷಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರು ಹಜ್ ಯಾತ್ರೆಗೆ ಮುಸ್ಲಿಂ ಮಹಿಳೆಯರ ಮೇಲಿನ ನಿಷೇಧವನ್ನು ತೆರವುಗೊಳಿಸಿರುವ ವಿಷಯವನ್ನು ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಓವೈಸಿ, ಇದೇನು ಮೋದಿ ಅವರ ಮಹಾನ್ ಕಾರ್ಯವಲ್ಲ, ಸೌದಿ ಅರೆಬಿಯಾ ಮಾಡಿದ ಘನಕಾರ್ಯದ ಕೀರ್ತಿಯನ್ನು ಮೋದಿ ತಮ್ಮ ಬಗಲಿಗೆ ಹಾಕಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಮೆಹ್ರಾಮ್ ನಿಷೇಧ ನೀತಿಯನ್ನು ಬದಲಿಸಿದ್ದರ ಬಗ್ಗೆ ಮಾತನಾಡುತ್ತ ಮೋದಿ, ಇಂತಹ ನೀತಿಯೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟಿದ್ದೆ ಎಂದಿದ್ದಾರೆ.
‘ಇಂತಹ ಅಸಮಾನತೆ ಏಕೆ? ಈ ವಿಚಾರವಾಗಿ ಆಳವಾಗಿ ತುಲನೆ ಮಾಡಿದಾಗ ನಿಜಕ್ಕು ಅಚ್ಚರಿ ಎಂದೆನಿಸಿತು. ಸ್ವಾಂತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದರು ಇಂತಹ ವಿಚಾರವನ್ನು ಗುರುತಿಸಿ ಸರಿಪಡಿಸಲು ಸಾಧ್ಯವಾಗದಿರುವ ಬಗ್ಗೆ ಬೇಸರವೆನಿಸುತ್ತಿದೆ. ಹಲವು ದಶಕಗಳಿಂದ ಮುಸ್ಲಿಂ ಮಹಿಳೆಯರು ಅಸಮಾನತೆಯಿಂದ ಬಳಲುತ್ತಿದ್ದಾರೆ. ಆದರೆ ಇಲ್ಲಿವರೆಗೆ ಆ ಬಗ್ಗೆ ಕನಿಷ್ಠ ಚರ್ಚೆಯನ್ನು ನಡೆಸಿಲ್ಲ’ ಎಂದು ಮೋದಿ ವಿಷಾಧ ವ್ಯಕ್ತ ಪಡಿಸಿದರು.
ಆದರೆ ಈಗಲೂ ಸೌದಿ ಅರೆಬಿಯಾ ಸರಕಾರ ಜತೆಗಾರನಿಲ್ಲದೆ ಒಂಟಿ ಮಹಿಳೆಗೆ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ.
Comments are closed.