ನವದೆಹಲಿ: 2018ನೇ ವರ್ಷದಲ್ಲಿ ದೇಶದ ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಡುವಿನ ಪ್ರತಿಷ್ಠೆಗೆ ಅಖಾಡ ಸಜ್ಜಾಗಲಿದೆ.
ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ನಾಗಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವುದರಿಂದ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಉತ್ಸಾಹ ಪುಟಿದೇಳುವಂತೆ ಮಾಡಿದೆ. ಈ ಚುನಾವಣೆಗಳ ಪರಿಣಾಮ ಮುಂದಿನ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೇಲೆ ಬೀರಲಿದೆ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಆಯಾ ರಾಜ್ಯಗಳ ಪ್ರಮುಖ ಪ್ರಾದೇಶಿಕ ಪಕ್ಷಗಳಿಗೂ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಈ ಎಂಟು ರಾಜ್ಯಗಳಿಂದ ಲೋಕಸಭೆಗೆ 99 ಸಂಸದರನ್ನು ಕಳುಹಿಸುವುದರಿಂದಲೂ ಇದು ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ದೇಶದ 29 ರಾಜ್ಯಗಳಲ್ಲಿ ಈಗಾಗಲೇ 19 ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಕಳೆದ ವರ್ಷ ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳಲ್ಲಿ ಬಿಜೆಪಿ ಪ್ರಯಾಸದ ಗೆಲುವು ಸಾಧಿಸಿದ್ದರಿಂದ ಈ ವರ್ಷ ನಡೆಯುವ ಚುನಾವಣೆಗಳು ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಲಿವೆ ಎಂದು ಅಂದಾಜಿಸಲಾಗಿದೆ.
Comments are closed.