ಚೆನ್ನೈ: ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಫೆ.21ರಂದು ಘೋಷಿಸುವುದಾಗಿ ಹೇಳಿದ್ದಾರೆ.
ಅದೇ ದಿನ ತಮ್ಮ ಹುಟ್ಟೂರಾದ ತಮಿಳುನಾಡಿನ ರಾಮನಾಥಪುರಂನಿಂದ ರಾಜ್ಯದಾದ್ಯಂತ ಪ್ರವಾಸ ಆರಂಭಿಸಲಿರುವ ಕಮಲ್ ಹಾಸನ್ ಅವರು ಮಧುರೈ, ದಿಂಡಿಗಲ್, ಶಿವಗಂಗೈಗೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ಕಮಲ್ ಹಾಸನ್ ಅವರು, ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನರ ಅವಶ್ಯಕತೆ ತಿಳಿದುಕೊಳ್ಳುವೆ. ಅವರ ಸಂಕಷ್ಟಗಳನ್ನು ತಿಳಿದುಕೊಳ್ಳುವೆ. ಜನರ ಆಸೆ–ಆಕಾಂಕ್ಷೆಗಳ ಬಗ್ಗೆ ಗಮನ ಹರಿಸುವೆ. ಈ ಪ್ರವಾಸವು ತಮಿಳುನಾಡು ರಾಜ್ಯದ ಜನರ ಅಗತ್ಯತೆಗಳನ್ನು ಅರಿಯಲು ಅನುಕೂಲವಾಗಲಿದೆಎಂದಿದ್ದಾರೆ. ಅಲ್ಲದೇ ಇದೇ ವೇಳೆ ಹೊಸ ಪಕ್ಷದ ಹೆಸರು, ಆಶಯಗಳು, ಉದ್ದೇಶಗಳನ್ನು ಫೆ.21ರಂದು ಬಹಿರಂಗಪಡಿಸುವೆ ಎಂದು ಹೇಳಿದ್ದಾರೆ.
ಕಳೆದ 2017 ರ ನವೆಂಬರ್ ನಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಸೂಚನೆ ನೀಡಿದ್ದ ಕಮಲ್ ಹಾಸನ್, ತಮ್ಮ ಉದ್ದೇಶ ಖಂಡಿತ ಪ್ರಚಾರ ಗಳಿಸುವುದಲ್ಲ ಎದು ಸ್ಪಷ್ಟಪಡಿಸಿದ್ದರು. “ನಾನು ಯಾವುದೇ ಪ್ರಚಾರಕ್ಕಾಗಲಿ ರಾಜಕೀಯಕ್ಕೆ ಬರುತ್ತಿಲ್ಲ. ಅಥವಾ ನಾನೊಬ್ಬ ಬಂಡಾಯ ನಾಯಕ ಎಂದೂ ಭಾವಿಸಬೇಕಿಲ್ಲ. ನನಗೆ ನನ್ನ ಜನರನ್ನು ಅರ್ಥಮಾಡಿಕೊಳ್ಳುವುದಕ್ಕೆ ರಾಜಕೀಯವೊಂದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ನಾನು ಭಾವಿಸಿದ್ದೇನೆ. ಕಲಿಯುವುದಕ್ಕೆ ಮತ್ತು ಜನ ಸೇವೆ ಮಾಡುವುದಕ್ಕೆ ಇದೊಂದು ಉತ್ತಮ ಅವಕಾಶ”. ಎಂದು ಅವರು ಹೇಳಿದ್ದರು. ಅಂತೆಯೇ ಅಕಸ್ಮಾತ್ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಿದರೆ ನಾನು ಅವರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸಹ ಕಳೆದ ಸೆಪ್ಟೆಂಬರ್ ನಲ್ಲಿ ಕಮಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Comments are closed.