ಹೊಸದಿಲ್ಲಿ: ಆಳವಾದ ಕಂದಕ ತೋಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪೈಪ್‌ನಿಂದ ಪೆಟ್ರೋಲ್ ಕದಿಯಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೂರಜ್ ವಿಹಾರದಲ್ಲಿ ಮಂಗಳವಾರ ರಾತ್ರಿಯಂದು ಭಾರಿ ಸದ್ದು ಕೇಳಿಸಿತು, ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ ಸ್ಥಳೀಯರು ಮನೆಯೊಳಗೆ ಸೇರಿಕೊಂಡಿರಲಿಲ್ಲ. ಬಾಂಬ್ ಅಲ್ಲ ಬದಲಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಸೇರಿರುವ ಪೆಟ್ರೋಲ್ ಸಾಗಾಟದ ಪೈಪ್ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೊದಲಿಗೆ ಅಲ್ಲೇ ಸಮೀಪ ಗುಜರಿ ಅಂಗಡಿಯ ಮಾಲೀಕ ಜುಬೈರ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಜುಬೈರ್ ತಪ್ಪೊಪ್ಪಿಕೊಂಡಿದ್ದಾನೆ. ಈತನೊಂದಿಗಿದ್ದ ಮತ್ತೋರ್ವ ಸಹಚರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಗುಜರಿಯಂಗಡಿ ಇಟ್ಟುಕೊಂಡಿದ್ದ ಜುಬೈರ್ ಮೂರು ತಿಂಗಳ ಹಿಂದೆ ಪಾಣಿಪತ್‌ಗೆ ನಿರ್ಮಿಸಲಾಗಿರುವ ಪೆಟ್ರೋಲ್ ಸಾಗಾಟದ ಪೈಪ್‌ಲೈನ್ ಪತ್ತೆ ಹಚ್ಚಿದ್ದಾನೆ. ಕೂಡಲೇ ತನ್ನ ಮಿತ್ರನ ಸಹಾಯದಿಂದ ಕಂದಕ ತೋಡಿ ಮತ್ತೊಂದು ಪೈಪ್‌ಲೈನ್ ನಿರ್ಮಿಸಿದರು.
ಸುಮಾರು 2.5 ಅಡಿ ಅಗಲದ 150 ಅಡಿಗೂ ಉದ್ದದ ಕಂದಕವನ್ನು ತೋಡಿದ ಜುಬೈರ್ ಹಾಗೂ ಟೀಂ ಕಳೆದ ವಾರವಷ್ಟೇ ಮೂಲ ಪೈಪ್‌ಲೈನ್ ತಲುಪಿದ್ದರು. ಈ ವರೆಗೆ ಮೂರು ಸಾವಿರ ಲೀಟರ್ ಕಳ್ಳತನ ಮಾಡಿದ್ದ ಟೀಂ ಈ ಪೆಟ್ರೋಲ್ ಅನ್ನು ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.
ಮಂಗಳವಾರದಂದು ಪೈಪ್ ಕೊರೆಯಲು ಮುಂದಾದ ಟೀಂ, ಗ್ಯಾಸ್ ಕಟ್ಟರ್ ಮೂಲಕ ಪೈಪ್ ಕೊರೆದಿದ್ದಾರೆ. ಆದರೆ ಅತಿಯಾದ ಉಷ್ಣ ದಿಂದ ಪೈಪ್ ಒಡೆದು ಹೋಗಿ ಭಾರಿ ಸದ್ದು ಕೇಳಿಸಿದೆ. ಆಗ ಟೀಂನಲ್ಲಿರುವ ಎಲ್ಲರೂ ಪರಾರಿಯಾಗಿದ್ದಾರೆ. ‘ ನಾವು ಕಳ್ಳರನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದ್ದೆವು, ಸದ್ಯ ಓರ್ವನನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ನುರಿತ ಕಳ್ಳರು ತಂಡ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Comments are closed.