ಬೆಳಗಾವಿ: ಮಹದಾಯಿ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ವಿವಾದ ಸಂಬಂಧ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಗೋವಾ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮಹದಾಯಿ ಕುಡಿಯುವ ನೀರು ವಿವಾದ ಸಂಬಂಧ ಮಹದಾಯಿ ನ್ಯಾಯಾಧೀಕರಣದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ವಿಚಾರಣೆ ಆರಂಭಗೊಳ್ಳಲಿದೆ.
ಕಳಸಾ-ಬಂಡೂರಿ ನಾಲೆ ನಿರ್ಮಾಣದ ಕಣಕುಂಬಿ ಪ್ರದೇಶಕ್ಕೆ ಕೆಲ ದಿನಗಳ ಹಿಂದಷ್ಟೇ ಗೋವಾ ಜಲಸಂಪನ್ಮೂ ಸಚಿವ ವಿನೋದ್ ಪಾಲೇಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ರಾಜ್ಯ ಸರ್ಕಾರ ಹಾಗೂ ಕನ್ನಡಿಗರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು.
ಇದಾದ ಬಳಿಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದ ಗೋವಾ ಸರ್ಕಾರ, ಕರ್ನಾಟಕ ರಾಜ್ಯದ ಅನುಮತಿ ಪಡೆಯದೆಯೇ ಯೋಜನಾ ಸ್ಥಳಕ್ಕೆ ನಿಯೋಗವನ್ನು ಕಳುಹಿಸಿತ್ತು. ಬಿಜೆಪಿ ಶಾಸಕ ಹಾಗೂ ಗೋವಾ ಡೆಪ್ಯೂಟಿ ಸ್ಪೀಕರ್ ಮೈಕೆಲ್ ಲೋಬ, ಸ್ಪೀಕರ್ ಪ್ರಮೋದ್ ಸಾವಂತ್ ಅವರು ಯೋಜನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗಳನ್ನೇ ಸುರಿಸಿದ್ದರು.
ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿಕೆ ನೀಡಿದ್ದ ಸ್ಪೀಕರ್ ಲೋಬೋ ಅವರು, ಫೆ.19 ರಿಂದ ಅಧಿವೇಶನ ಆರಂಭಗೊಳ್ಳಲಿದ್ದು, ಮಹದಾಯಿ ವಿವಾದ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗುತ್ತದೆ. ಮಲಪ್ರಭಾ ನದಿಗೆ ಕರ್ನಾಟಕ ರಾಜ್ಯ ಈಗಾಗಲೇ ಮಹದಾಯಿ ಅಣೆಕಟ್ಟಿನಿಂದ ನೀರನ್ನು ಹರಿಸುತ್ತಿದೆ. ಸ್ಪೀಕರ್ ಜೊತೆಗೆ ನಾನೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹದಾಯಿಗೆ ನೀರನ್ನು ಹರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ನೀರನ್ನು ನಿಯಂತ್ರಿಸುವ ಗೇಟ್’ನ್ನು ಅಳವಡಿಸಿದ್ದಾರೆ. ಗೋವಾ ರಾಜ್ಯಕ್ಕೆ ಹರಿಯುವ ನೀರು ಕಡಿಮೆಯಾಗಿದೆ ಎಂದು ಆರೋಪ ಮಾಡಿದ್ದರು.
ಮಹದಾಯಿ ವಿವಾದ ಸಂಬಂಧ ಈ ಹಿಂದೆ ಮಾತುಕತೆ ನಡೆಸುವುದಾಗಿ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಆದರೆ, ಪಾಲೇಕರ್ ಮಾತ್ರ ಮಹದಾಯಿ ನ್ಯಾಯಾಧೀಕರಣದಲ್ಲಿ ಕರ್ನಾಟಕ ರಾಜ್ಯದ ವಿರುದ್ಧ ಗೆಲುವು ಸಾಧಿಸುವುದಾಗಿ ಹೇಳಿಕೆಯನ್ನು ನೀಡಿದ್ದರು. ಇದಾದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪರಿಕ್ಕರ್ ಹಾಗೂ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಸಭೆ ನಡೆಸಿದ್ದರು. ಇದು ಗೋವಾದ ಆಡಳಿತಾರೂಢ ಪಕ್ಷದಲ್ಲಿ ವೈಮನಸ್ಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘದ ಕಾರ್ಯ ಸಮಿತಿಯ ಅಧ್ಯಕ್ಷ ಅಶೋಕ್ ಚಂದರ್ಗಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ನೀರು ಬಿಡುಗಡೆ ಮಾಡುತ್ತಿದೆ ಎಂಬ ಮೈಕೆಲ್ ಲೋಬೋ ಅವರ ಹೇಳಿಕೆ ಸುಳ್ಳು ಹಾಗೂ ಆಧಾರರಹಿತ ಆರೋಪವಾಗಿದೆ. ನ್ಯಾಯಾಧೀಕರಣವನ್ನು ತಪ್ಪು ಹಾದಿಗೆಳೆಯರು ಗೋವಾ ಸರ್ಕಾರ ಯತ್ನಿಸುತ್ತಿದೆ. ಗೋವಾ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ವಿಚಾರವನ್ನು ರಾಜಕೀಯ ಮಾಡುತ್ತಿದೆ. ಕರ್ನಾಟಕ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೂ, ಗೋವಾ ಶಾಸಕರು ಹಾಗೂ ಅಧಿಕಾರಿಗಳು ಕರ್ನಾಟಕದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದಾರೆಂದು ಹೇಳಿದ್ದಾರೆ.
Comments are closed.