ರಾಷ್ಟ್ರೀಯ

ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ‘ಕಿತ್ತಳೆ’ ಪಾಸ್‌ಪೋರ್ಟ್‌; ನಿರ್ಧಾರ ಕೈಬಿಟ್ಟ ಕೇಂದ್ರ

Pinterest LinkedIn Tumblr

ನವದೆಹಲಿ : ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್‌ಪೋರ್ಟ್‌ವಿತರಿಸುವ ಯೋಚನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸದಿರುವ ನಿರ್ಧಾರದಿಂದಲೂ ಹಿಂದೆ ಸರಿದಿದೆ.

ಸದ್ಯ ಚಾಲ್ತಿಯಲ್ಲಿರುವಂತೆ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸುವ ಪದ್ಧತಿ ಮುಂದುವರಿಸುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ತಂದೆ, ತಾಯಿ, ಸಂಗಾತಿಯ ಹೆಸರು ಹಾಗೂ ವಿಳಾಸ ಮುದ್ರಿಸಲಾಗುತ್ತಿದ್ದು, ಇದನ್ನು ವಿಳಾಸ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದೆ.

10ನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ನೀಡಲು ಕೇಂದ್ರ ಚಿಂತನೆ ನಡೆಸಿತ್ತು. ವಿದೇಶಗಳಲ್ಲಿ ಭಾರತೀಯ ಕಾರ್ಮಿಕರ ಶೋಷಣೆ ತಪ್ಪಿಸುವುದು ಇದರ ಉದ್ದೇಶವಾಗಿತ್ತು.

ಕಾಂಗ್ರೆಸ್‌ಅಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ಹಲವರು ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ಎತ್ತಿದ್ದರು. ಪ್ರತ್ಯೇಕ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ಬಡವರು ಮತ್ತು ಅನಕ್ಷರಸ್ಥ ಕಾರ್ಮಿಕರ ತಾರತಮ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ವಿದೇಶಾಂಗ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ, ಪಾಸ್‌ಪೋರ್ಟ್‌ಕೊನೆಯ ಪುಟದಲ್ಲಿ ತಂದೆಯ ಹೆಸರು ನಮೂದಿಸುವ ಅಗತ್ಯವಿಲ್ಲ ಎಂದು ವರದಿ ನೀಡಿತ್ತು.

ಈ ವರದಿ ಆಧರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ ಕೊನೆಯ ಪುಟದಲ್ಲಿ ವಿಳಾಸ ಮುದ್ರಿಸುವ ಪರಿಪಾಠ ಕೈಬಿಡಲು ಮುಂದಾಗಿತ್ತು. ಆದರೆ, ಹೆಚ್ಚುತ್ತಿರುವ ವಿರೋಧಕ್ಕೆ ಮಣಿದ ಸರ್ಕಾರ ತನ್ನ ಈ ಎರಡೂ ನಿರ್ಧಾರಗಳನ್ನು ಕೈಬಿಟ್ಟಿದೆ.

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸದ್ಯ ಮೂರು ಬಣ್ಣಗಳಲ್ಲಿ ಪಾಸ್‌ಪೋರ್ಟ್ ವಿತರಿಸುತ್ತಿದೆ. ಅಧಿಕಾರಿಗಳಿಗೆ ಬಿಳಿ, ರಾಜತಾಂತ್ರಿಕರಿಗೆ ಕೆಂಪು ಮತ್ತು ಇತರರಿಗೆ ನೀಲಿ ಬಣ್ಣದ ಪಾಸ್‌ಪೋರ್ಟ್ ವಿತರಿಸುತ್ತಿದೆ.

Comments are closed.