ಹೊಸದಿಲ್ಲಿ: ಕೃಷಿ ಉತ್ಪನ್ನಗಳ ಹೆಚ್ಚಳ ಹಾಗೂ ಗ್ರಾಮೀಣ ಆರ್ಥಿಕತೆಯ ಏಳ್ಗೆಗೆ ಬಂಪರ್ ಕೊಡುಗೆ ಲಭಿಸಿದೆ. ಈ ದಿಸೆಯಲ್ಲಿ ಹೊಸ ಯೋಜನೆಗಳು ರೂಪುಗೊಳ್ಳುವ ಜತೆಗೆ ಹಾಲಿ ಯೋಜನೆಗಳ ಸಮರ್ಪಕ ನಿರ್ವಹಣೆಗೂ ಒತ್ತು ನೀಡಲಾಗಿದೆ. ಇದಕ್ಕೆಂದೇ ಬೃಹತ್ 14.34 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ಯೇತರ ಅನುದಾನ ಘೋಷಣೆಯಾಗಿದೆ.
ಹಣಕಾಸು ಸಚಿವ ಜೇಟ್ಲಿಯವರು ಮಂಡಿಸಿದ ಬಜೆಟ್‌ನ ಆರಂಭದಲ್ಲಿಯೇ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಸ್ಥಾನ ಪಡೆದಿದ್ದು ಅದರ ಆದ್ಯತೆಯನ್ನು ಸಾರಿದೆ. ”ಗ್ರಾಮೀಣ ಬದುಕನ್ನು ಬಲಿಷ್ಟಗೊಳಿಸಲು ನೆರವಾಗುವ ಕೃಷಿ ಹಾಗೂ ಕೃಷಿ ಆಧರಿತ ಚಟುವಟಿಕೆಗಳ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ಮೇಲೆ ಹೆಚ್ಚು ವ್ಯಯ ಮಾಡಲಾಗುವುದು,” ಎಂದು ಜೇಟ್ಲಿ ಹೇಳಿದ್ದಾರೆ.
ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಮೇಲೆ ಬಜೆಟ್ ಹೊರತಾದ ಮತ್ತು ಬಜೆಟ್‌ಯೇತರ ಮೂಲಗಳಿಂದ 14.34 ಲಕ್ಷ ಕೋಟಿ ರೂ. ವ್ಯಯಸಲಾಗುವುದು. ದೇಶದಲ್ಲಿರುವ ಶೇ.86ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ಹೊಂದಿದ್ದು ಇವರಿಗೆ ಮಾರುಕಟ್ಟೆ ಜತೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಆ ಮೂಲಕ ಸಣ್ಣ ರೈತರ ಆದಾಯ ಹೆಚ್ಚಳ ಸಾಧ್ಯವಾಗಲಿದೆ ಎಂದರು.
ಕೃಷಿಗೆ ಈ ಬಜೆಟ್‌ನ ಆದ್ಯತೆಯ ಇತರೆ ಪ್ರಮುಖ ಅಂಶಗಳು:
* ಹಿಂಗಾರು ಬೆಳೆಗೆ, ಅದರ ಉತ್ಪನ್ನ ವೆಚ್ಚದ ಒಂದೂವರೆ ಪಟ್ಟಿನಷ್ಟು ಹೆಚ್ಚು ‘ಕನಿಷ್ಟ ಬೆಂಬಲ ಬೆಲೆ’ ಘೋಷಣೆ ಭರವಸೆ.
*ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭಗಳಲ್ಲಿ ರೈತರಿಗೆ ಸೂಕ್ತ ಸಂಭಾವನೆ ನೀಡುವುದು. ಸಂಬಂಧಪಟ್ಟ ರಾಜ್ಯ ಸರಕಾರಗಳ ಜತೆ ನೀತಿ ಆಯೋಗ ಚರ್ಚಿಸಿ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಲಿದೆ.
*ಕೃಷಿ ಸಾಲ ನೀಡಿಕೆ ಮೊತ್ತು 11 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ.
*ದೇಶದ ವಿವಿಧೆಡೆ 22 ಸಾವಿರ ಗ್ರಾಮೀಣ ಮಾರುಕಟ್ಟೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಮೀಸಲು.
*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೃಷಿ ಮಾರುಕಟ್ಟೆ, ಮಾಧ್ಯಮಿಕ ಶಾಲೆ ಮತ್ತು ಆಸ್ಪತ್ರೆಗಳ ಜತೆ ಗ್ರಾಮದ ರಸೆÜ್ತಗೆ ಸಂಪರ್ಕ ಕಲ್ಪಿಸಲು ನಿರ್ಧಾರ.
*ಮಹಿಳಾ ಸ್ವಸಹಾಯ ಗುಂಪುಗಳ ಹೆಚ್ಚುವರಿ ನಿಧಿ (ಕಾರ್ಪಸ್ ಫಂಡ್) 2019ರ ಮಾರ್ಚ್ ವೇಳೆಗೆ 75 ಸಾವಿರ ಕೋಟಿ ರೂ.ಗೆ ಹೆಚ್ಚಳ. (2016-17ರ ಸಾಲಿನಲ್ಲಿ ಈ ಮೊತ್ತ 42 ಸಾವಿರ ಕೋಟಿ ರೂ.ಇತ್ತು).
*ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆಗಳ ಅನುಷ್ಠಾನಕ್ಕೆ ಮೀಸಲಿಟ್ಟಿರುವ ಅನುದಾನ 4,500 ಕೋಟಿ ರೂ.ಗಳಿಂದ 5,750 ಕೋಟಿ ರೂ.ಗಳಿಗೆ ಏರಿಕೆ.
*ನೀರಾವರಿ ವಂಚಿತ ದೇಶದ 96 ಜಿಲ್ಲೆಗಳಿಗೆ ಪರ್ಯಾಯ ನೀರಾವರಿ ಸವಲತ್ತು ಕಲ್ಪಿಸುವುದಕ್ಕಾಗಿ 2,600 ಕೋಟಿ ರೂ. ಅನುದಾನ ಮೀಸಲು.
* ಮಾರ್ಚ್ 2018ರ ಅಂತ್ಯದ ವೇಳೆಗೆ ದೇಶಾದ್ಯಂತ 585 ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ (ಎಪಿಎಂಸಿ) ‘ಇ-ನಾಮ್’ಗಳ (ಆನ್‌ಲೈನ್ ಮಂಡಿಗಳು) ವೇದಿಕೆ ಸಂಪರ್ಕ. ಪ್ರಸ್ತುತ 470 ಎಪಿಎಂಸಿಗಳು ‘ಇ-ನಾಮ್’ ಸಂಪರ್ಕ ಹೊಂದಿವೆ.
* ಸಾವಯವ ಕೃಷಿ ಉತ್ತೇಜನಕ್ಕೆ ಕ್ರಮ. ‘ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇನ್ಸ್’ (ಎಫ್‌ಪಿಒ) ಮತ್ತು ‘ವಿಲೇಜ್ ಪ್ರೊಡ್ಯೂಸರ್ಸ್ ಆರ್ಗನೈಸೇಷನ್’ಗಳಿಂದ (ವಿಪಿಒ) ತಲಾ 1000 ಹೆಕ್ಟೇರ್‌ಗಳಲ್ಲಿ ಸಾವಯವ ಬೇಸಾಯಕ್ಕೆ ಉತ್ತೇಜನ; ಮಹಿಳಾ ಸ್ವಸಹಾಯ ಗುಂಪುಗಳಿಂದಲೂ ಸಾವಯವ ಕೃಷಿಗೆ (ಎಸ್‌ಎಚ್‌ಜಿ) ‘ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ’ದ ಅಡಿಯಲ್ಲಿ ಉತ್ತೇಜನ.
* ಮೀನುಗಾರರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿರುವವರಿಗೂ ‘ಕಿಸಾನ್ ಕ್ರೆಡಿಟ್ ಕಾರ್ಡ್’ ಸೌಲಭ್ಯ ವಿಸ್ತರಣೆ.
* ‘ಗ್ರೀನ್ ಗೋಲ್ಡ್’ ಎಂದು ಹೆಸರಿಸಲಾಗಿರುವ ಬಿದಿರನ್ನು ಹೆಚ್ಚು ಪ್ರದೇಶದಲ್ಲಿ ಬೆಳೆಸಲು ಪರಿಷ್ಕೃತ ‘ರಾಷ್ಟ್ರೀಯ ಬಿದಿರು ಯೋಜನೆ’ಗಾಗಿ 1290 ಕೋಟಿ ರೂ. ಅನುದಾನ.
*ಸೌರಶಕ್ತಿ ಪಂಪ್‌ಗಳನ್ನು ಬಳಸುವ ರೈತರಿಂದ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಸರಬರಾಜು ಕಂಪನಿಗಳು ಖರೀದಿಸಲು ಕ್ರಮ.
*ಮೀನು ಮತ್ತು ಜಲ ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್‌ಎಐಡಿಎಫ್) ಮತ್ತು ‘ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ’ಗಾಗಿ (ಎಎಚ್‌ಐಡಿಎಫ್) 10,000 ಕೋಟಿ ರೂ. ಅನುದಾನ.
* ಕೃಷಿ ಭೂಮಿ ಮಾಲೀಕತ್ವವಿಲ್ಲದೆ, ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುತ್ತಿರುವವರಿಗೂ ಬೆಳೆ ಸಾಲ ನೀಡಲು ಸದ್ಯದಲ್ಲೇ ಹೊಸ ವ್ಯವಸ್ಥೆ.
”ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಲು ಸರಕಾರ ಬಯಸುತ್ತಿದೆ. ಕೃಷಿಕರು ಇರುವ ಭೂಮಿಯಲ್ಲೇ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ತೆಗೆಯುವಂತಾಗಬೇಕು. ಜೊತೆಗೆ ಅವರ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕೆಂದು ಸರಕಾರ ಬಯಸುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
Comments are closed.