ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಕೋಟಿ ಅಕ್ರಮ ವಹಿವಾಟಿನ ಆರೋಪದಲ್ಲಿ ಬಂಧನಕ್ಕೀಡಾಗಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಬಂಧನಕ್ಕೀಡಾಗುತ್ತಿದ್ದಂತೆಯೇ ಕಾರ್ತಿ ಚಿದಂಬರಂ ಅವರನ್ನು ದೆಹಲಿಗೆ ಕರೆದೊಯ್ದು, ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮೀತ್ ಆನಂದ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಮುಂದೆ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದರು.
ಸಿಬಿಐ ತಮ್ಮ ವಿರುದ್ದ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸಿದ ಕಾರ್ತಿ, ನಾನೇನು ಈ ದೇಶವನ್ನು ತೊರೆದವನಲ್ಲ. ಬದಲಿಗೆ ಈ ದೇಶಕ್ಕೇ ವಾಪಸ್ ಆದವನು ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಇನ್ನು ಕಾರ್ತಿ ಬಂಧನ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಪಕ್ಷ, 11, 500 ಕೋಟಿ ಕೊಳ್ಳೆ ಹೊಡೆದ ನೀರವ್ ಮೋದಿ, ಮೆಹುಲ್ ಚೋಕ್ಸಿ ರಂತಹ ಉದ್ಯಮಿಗಳು ದೇಶ ತೊರೆಯಲು ಬಿಜೆಪಿ ಅನುವು ಮಾಡಿಕೊಟ್ಟಿದೆ. ಆದರೆ ಈ ಬಗ್ಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ ಎಂದು ಹರಿಹಾಯ್ದರು.
ಇನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬುಧವಾರ ಬೆಳಗ್ಗೆ ಚೆನ್ನೈಯಲ್ಲಿ ಬಂಧಿಸಿದೆ. ಲಂಡನ್‌ನಿಂದ ಹಿಂದಿರುಗಿದ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿಯೇ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು. ಅಗತ್ಯ ಪ್ರಕ್ರಿಯೆಗಳ ಬಳಿಕ ಕಾರ್ತಿಯವರನ್ನು ದೆಹಲಿಗೆ ಕರೆದೊಯ್ದು, ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮೀತ್ ಆನಂದ್ ಅವರ ಮುಂದೆ ಹಾಜರುಪಡಿಸಲಾಯಿತು.
Comments are closed.