ಪಾಟ್ನಾ: ವರ ಬೋಳುಮಂಡೆಯವನಾಗ್ತಿದ್ದಾನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.
ವಧುವಿನ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು.
ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು. ವಧು ವರ ಹೂಮಾಲೆ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನೂ ಮುಗಿಸಿದ್ದರು. ಆದ್ರೆ ಮತ್ತೊಂದು ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.
ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ.
ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು. ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು.
ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.
Comments are closed.