ರಾಷ್ಟ್ರೀಯ

ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನ್ ಎಸೆದ ಕಾಮುಕರು: ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Pinterest LinkedIn Tumblr

ನವದೆಹಲಿ: ಹೋಳಿ ಹಬ್ಬದ ಸಂದರ್ಭದಲ್ಲಿ ಬಲೂನ್ ಗಳಲ್ಲಿ ಬಣ್ಣ, ನೀರುಗಳನ್ನು ತುಂಬಿ ಎಸೆಯುವುದು ಸಾಮಾನ್ಯ. ಆದರೆ, ದೆಹಲಿಯಲ್ಲಿ ಅಸಹ್ಯಕರ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಕಾಮುಕರ ಗುಂಪೊಂದು ವೀರ್ಯ ತುಂಬಿದ ಬಲೂನ್ ಗಳನ್ನು ಎಸೆದಿರುವ ಘಟನೆ ಬುಧವಾರ ನಡೆದಿದೆ.

ಬಸ್ಸಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳ ಮೇಲೆ ಬಲೂನ್ ವೊಂದು ಬಿದ್ದಿದೆ. ಬಲೂನ್ ನಿಂದ ಹೊರಬಂದ ವಸ್ತುವನ್ನು ನೋಡಿದ ಯುವತಿಗೆ ಅಸಹ್ಯವಾಗಿದೆ.

ಮಾನವೀಯತೆಯೆಂಬುದು ಹಾಳಾಗಿ ಹೋಗಿದೆ. ಅಪರಿಚಿತರ ಮೇಲೆ ಹೀಗೆ ವೀರ್ಯ ತುಂಬಿದ ಬಲೂನ್ ಎಸೆಯುವುದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಇದು ನನ್ನ ಗೌರವಕ್ಕೆ ಚ್ಯುತಿ ತಂದಿದೆ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೀಸಸ್ ಮತ್ತು ಮೇರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ದೆಹಲಿ ಪೊಲೀಸ್ ಆಯುಕ್ತ ಕಚೇರಿ ಎದುರು ಪ್ರತಿಭಟನೆಗಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಂತಹ ವರ್ತನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲೆಡೆ ತಪಾಸಣೆಗಳು ನಡೆಯುತ್ತಿವೆ. ಸ್ಥಳೀಯರ ಮೇಲೆ ಪೊಲೀಸರು ಗಮನ ಹರಿಸುತ್ತಿದ್ದಾರೆ. ಯಾರಾದರೂ ಜನರ ಮೇಲೆ ಬಲೂನ್ ಗಳನ್ನು ಎಸೆದು ಉಪದ್ರವ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

Comments are closed.