ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಸಂಭಾವ್ಯ ಬಂಧನ ಭೀತಿಯಿಂದ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಹಾಗಿದ್ದರೂ, ಯಾವುದೇ ಎಫ್‌ಐಆರ್ ದಾಖಲಿಸದೆ ಇ.ಡಿ ಆರಂಭಿಸಿರುವ ತನಿಖೆಯನ್ನು ಸ್ಥಗಿತಗೊಳಿಸಬೇಕೆಂಬ ಕಾರ್ತಿ ಕೋರಿಕೆಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಕಾರ್ತಿ ಸದ್ಯ ಸಿಬಿಐ ವಶದಲ್ಲಿದ್ದು ಅದು ಇಂದಿಗೆ ಕೊನೆಗೊಳ್ಳಲಿದೆ. ಬಳಿಕ ವಿಚಾರಣೆಗಾಗಿ ತಮ್ಮ ಕಕ್ಷಿದಾರರನ್ನು ಇ.ಡಿ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ತಡೆಯಲು ನಿರೀಕ್ಷಣಾ ಜಾಮೀನು ನೀಡಬೇಕೆಂದು ಕಾರ್ತಿ ಪರ ವಕೀಲ ಕಪಿಲ್ ಸಿಬಲ್ ಕೋರ್ಟಿಗೆ ಮನವಿ ಮಾಡಿದರು.
‘ತನಿಖೆಗೆ ಎಲ್ಲ ರೀತಿಯಿಂದಲೂ ನಾವು ಸಹಕರಿಸಲು ಸಿದ್ಧ. ಆದರೆ ನನಗೆ ಬಂಧನದ ಭೀತಿ ಕಾಡುತ್ತಿದೆ’ ಎಂದು ಕಾರ್ತಿ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.
ಮಾಜಿ ವಿತ್ತಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರನಾಗಿರುವ ಕಾರ್ತಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಕಳೆದ ವಾರ ಸಿಬಿಐ ಬಂಧಿಸಿತ್ತು. ನಂತರ ಅವರನ್ನು ನ್ಯಾಯಾಲಯ ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು. ಅದು ಇಂದಿಗೆ ಕೊನೆಗೊಳ್ಳುತ್ತಿದೆ.
ಇ.ಡಿ ಮತ್ತು ಸಿಬಿಐ ತನಿಖೆ ವಿಚಾರಗಳು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ. ಐಎನ್‌ಎಕ್ಸ್ ಮೀಡಿಯಾಗೆ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅಕ್ರಮವಾಗಿ ಅನುಮತಿ ದೊರಕಿಸಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ಕಾರ್ತಿ ಪರ ವಕೀಲರ ಸುಪ್ರೀಂ ಕೋರ್ಟಿಗೆ ಸೋಮವಾರ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 8ಕ್ಕೆ ನಿಗದಿಯಾಗಿದೆ.
Comments are closed.