ರಾಷ್ಟ್ರೀಯ

ಅಯೋಧ್ಯೆ: ಭೂಸ್ವಾಧೀನ ಮಾರ್ಗ ಅನುಸರಿಸಿ: ಮೋದಿಗೆ ಸ್ವಾಮಿ ಪತ್ರ

Pinterest LinkedIn Tumblr


ಹೊಸದಿಲ್ಲಿ : ರಾಮಜನ್ಮಭೂಮಿ ದೇವಸ್ಥಾನವನ್ನು ನಿರ್ಮಿಸಲು ವಿವಾದಿತ ಅಯೋಧ್ಯೆ ನಿವೇಶನವನ್ನು ಕಾನೂನು ಸಮ್ಮತ ಭೂಸ್ವಾಧೀನ ಪ್ರಕ್ರಿಯ ಮೂಲಕ ಸರಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂದು ವಿವಾದಿತ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

“ಅಯೋಧ್ಯೆಯ ವಿವಾದಿತ ಸ್ಥಳವನ್ನು ಕಾನೂನು ಪ್ರಕಾರ ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಅಧ್ಯಾದೇಶವೊಂದನ್ನು ಜಾರಿಗೆ ತರಬೇಕು; ಇದನ್ನು ಅನುಸರಿಸಿ ಕಾನೂನು ರೂಪಣೆಯಾಗಬೇಕು. ಅನಂತರ ಆಗಮ ಶಾಸ್ತ್ರದ ತಿಳಿವಳಿಕೆ ಹೊಂದಿರುವ ಧಾರ್ಮಿಕ ನಾಯಕರ ಸಂಸ್ಥೆಗೆ ಹಸ್ತಾಂತರಿಸಬೇಕು; ಅವರಿಗೆ ಅಲ್ಲಿ ರಾಮ ಜನ್ಮಭೂಮಿ ದೇವಸ್ಥಾನವನ್ನು ಸ್ಥಾಪಿಸುವಂತೆ ಸೂಚಿಸಬೇಕು’ ಎಂದು ಸುಬ್ರಮಣಿಯನ್‌ ಸ್ವಾಮಿ ಪತ್ರದಲ್ಲಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಅಯೋಧ್ಯೆಯ ವಿವಾದಿತ ಸ್ಥಳ ತಮ್ಮದೆಂದು ಹೇಳಿಕೊಳ್ಳುವವರು ನ್ಯಾಯಾಲಯದಲ್ಲಿ ಭೂಮಾಲಕತ್ವ ವ್ಯಾಜ್ಯದಲ್ಲಿ ವ್ಯಸ್ತರಾಗಿದ್ದು ಈ ವಿಷಯವನ್ನು ಇದೇ ಮಾರ್ಚ್‌ 23ರಂದು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಎತ್ತಿಕೊಳ್ಳಲಿದೆ. ವಿವಾದಿತ ಸ್ಥಳ ತಮ್ಮದೆಂದು ಹೇಳಿಕೊಳ್ಳುವ ವ್ಯಾಜ್ಯದಲ್ಲಿನ ಕಕ್ಷಿಗಾರರಿಗೆ ಹಣದ ಪರಿಹಾರವನ್ನು ನೀಡಿ ಆ ಸ್ಥಳವನ್ನು ಸರಕಾರ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಭಾವಿತ ವಕೀಲರು ಈ ವ್ಯಾಜ್ಯದಲ್ಲಿ ಯಾವುದೇ ಪ್ರಗತಿಯಾಗದಂತೆ ತಡೆಯೊಡ್ಡುತ್ತಿದ್ದಾರೆ. ಆದುದರಿಂದ ನನಗಿನ್ನಿಸುವುದೇನೆಂದರೆ ನಾವು ಸಂವಿಧಾನ ಮತ್ತು ಕಾನೂನನ್ನು ನಮ್ಮ ಶಸ್ತ್ರವನ್ನಾಗಿ ಬಳಸಿಕೊಂಡು ವಿವಾದಿತ ನಿವೇಶನವನ್ನು ಕಾನೂನು ಪ್ರಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಸ್ವಾಮಿ ಹೇಳಿದ್ದಾರೆ.

-ಉದಯವಾಣಿ

Comments are closed.