ರಾಷ್ಟ್ರೀಯ

ಮಹಿಳಾ ನ್ಯಾಯವಾದಿಯನ್ನು ಮದುವೆಗಾಗಿ ಕಾಡಿ ಪೀಡಿಸಿದ ವಕೀಲನಿಗೆ ಜೈಲು

Pinterest LinkedIn Tumblr


ಥಾಣೆ: ತನ್ನ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ ಮಹಿಳಾ ನ್ಯಾಯವಾದಿಯೋರ್ವರ ಕಚೇರಿಯನ್ನು ಅಕ್ರಮವಾಗಿ ಪ್ರವೇಶಿಸಿ, ಆಕೆಯನ್ನು ಹೀನಾಯವಾಗಿ ಅಶ್ಲೀಲ ಪದಗಳಿಂದ ಬೈದು ಅವಮಾನಿಸಿದ ಪ್ರಕರಣದಲ್ಲಿ 45 ವರ್ಷ ಪ್ರಾಯದ ವಕೀಲನಿಗೆ ಥಾಣೆ ನ್ಯಾಯಾಲಯ ಮೂರು ವರ್ಷಗಳ ಸಶ್ರಮ ಜೈಲು ಶಿಕ್ಷೆಯನ್ನು ವಿಧಿಸಿದೆ.

ಆರೋಪಿ ನ್ಯಾಯವಾದಿಯ ವಿರುದ್ಧ ಪೊಲೀಸರು ಐಪಿಸಿ ಸೆ.452 (ಗಾಯಗೊಳಿಸುವ ಉದೇಶದಲ್ಲಿ ಸಿದ್ಧತೆ ಮಾಡಿಕೊಂಡು ನಡೆಸುವ ಅತಿಕ್ರಮಣ), ಸೆ.509 (ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ನಡೆಸುವ ಮಾತಿನ ದಾಳಿ) , ಸೆ.504 (ಉದ್ದೇಶ ಪೂರ್ವಕ ಅವಮಾನ,ಶಾಂತಿ ಭಂಗ) ಕೇಸು ದಾಖಲಿಸಿದ್ದರು

ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದ ಮಹಿಳಾ ನ್ಯಾಯವಾದಿಯು ವಿಚ್ಛೇದಿತೆಯಾಗಿದ್ದು ಆಕೆ ವೈವಾಹಿಕ ವೆಬ್‌ ಸೈಟ್‌ಗಳಲ್ಲಿ ತನ್ನ ಬಯೋಡಾಟಾ ಅಪ್‌ಲೋಡ್‌ ಮಾಡಿದ್ದರು. ವಿಧುರನಾಗಿದ್ದ ವಕೀಲ, ಮದುವೆ ಪ್ರಸ್ತಾವವನ್ನು ಮಹಿಳಾ ನ್ಯಾಯವಾದಿಯ ಮುಂದೆ ಇಟ್ಟಿದ್ದರು. ಆದರೆ ಅದನ್ನಾಕೆ ತಿರಸ್ಕರಿಸಿದ್ದರು.

2016ರ ಸೆ.16ರಂದು ನಗರದ ನೌಪಾಡಾ ಪ್ರದೇಶದಲ್ಲಿರುವ ಆಕೆಯ ಕಚೇರಿಗೆ ಹೋದ ಆರೋಪಿ ವಕೀಲ, ಪುನಃ ತನ್ನ ಮದುವೆ ಪ್ರಸ್ತಾವ ಮುಂದಿಟ್ಟಾಗ ಆಕೆ ಅದನ್ನು ಮತ್ತೆ ತಿರಸ್ಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ವಕೀಲ ಆಕೆಯನ್ನು ಹೀನಾಮಾನವಾಗಿ ಅಶ್ಲೀಲ ಪದಗಳನ್ನು ಬಳಸಿ ಬೈದು ಬೆದರಿಕೆ ಹಾಕಿದ್ದ.

ಮಹಿಳಾ ನ್ಯಾಯವಾದಿಯ ಆಫೀಸಿನಲ್ಲಿ ಇದ್ದ ಇತರರು ಆರೋಪಿ ವಕೀಲನನ್ನು ಪೊಲೀಸ್‌ ಠಾಣೆಗೆ ಒಯ್ದು ಅಲ್ಲಿ ಎಫ್ಐಆರ್‌ ದಾಖಲಿಸಿದ್ದರು.

ವಾದ ಪ್ರತಿವಾದ ಆಲಿಸಿ ವಿಚಾರಣೆಯನ್ನು ಅಂತಿಮಗೊಳಿಸಿದ ನ್ಯಾಯಾಧೀಶರು, ಆರೋಪಿ ವಕೀಲನಿಗೆ 3 ವರ್ಷಗಳ ಕಠಿನ ಜೈಲು ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಿ ತೀರ್ಪು ನೀಡಿದರು.

-ಉದಯವಾಣಿ

Comments are closed.