ಹೊಸದಿಲ್ಲಿ: ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ಕಿರುಕುಳ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು ಈ ಸಂಬಂಧ ಗಟ್ಟಿ ಧ್ವನಿ ಎತ್ತಿ ಮಹಿಳೆಯರ ಪರ ನಿಲ್ಲಬೇಕಿದೆ ಎಂದು ಸುಮಾರು 165 ವಿಜ್ಞಾನಿಗಳ ಗುಂಪು ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದೆ.
ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ, ಐಐಟಿ, ಐಐಎಸ್ಸಿ ಸೇರಿದಂತೆ ಅನೇಕ ಸಂಸ್ಥೆಗಳ ಸುಮಾರು 165 ವಿಜ್ಞಾನಿಗಳು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.
‘ಸಾಧನೆಯ ಹಲವು ಕನಸುಗಳನ್ನು ಇಟ್ಟುಕೊಂಡು ಮಹಿಳೆಯರು ವಿಜ್ಞಾನ ಕ್ಷೇತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮುಂದೆ ಬರುತ್ತಿದ್ದಾರೆ. ಆದರೆ ಲೈಂಗಿಕ ಕಿರುಕುಳದ ಪ್ರಕರಣಗಳು ಅವರ ಉತ್ಸಾಹವನ್ನೇ ಕುಗ್ಗಿಸಿಬಿಡುತ್ತವೆ. ಶೈಕ್ಷಣಿಕ ಸಂಸ್ಥೆಗಳು, ಪ್ರಯೋಗಾಲಯಗಳಲ್ಲಿ ಮಹಿಳಾ ಬೋಧಕ ಸಿಬ್ಬಂದಿ, ವಿದ್ಯಾರ್ಥಿನಿಯರಿಗೆ ಭಯ ಮುಕ್ತ ವಾತಾವರಣ ಇರಬೇಕು. ಇದು ಸಾಧ್ಯವಾಗಬೇಕಾದರೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾದವರಿಗೆ ಶಿಸ್ತು ಕ್ರಮಗಳ ಮೂಲಕ ಕಠಿಣ ಎಚ್ಚರಿಕೆ ರವಾನಿಸಬೇಕು. ಕೇವಲ ಬಾಯಿಮಾತಿನಿಂದ ಖಂಡಿಸದೇ ಕಳಂಕಿತರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಉನ್ನತ ಸಮಿತಿಗಳಿಗೆ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ನಿಲ್ಲಿಸಬೇಕು. ಪ್ರಶಸ್ತಿಗಳಿಂದ ದೂರ ಇರಿಸಬೇಕು. ಸಂಶೋಧನೆಗಳಿಗೆ ಹಣಕಾಸಿನ ನೆರವು ಬಂದ್ ಮಾಡಬೇಕು,’ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಡಲಾಗಿದೆ.
Comments are closed.