ನೋಯಿಡಾ: ಮೂವರು ಯುವತಿಯರನ್ನು ಪ್ರೀತಿಸುತ್ತಿದ್ದ ಒಬ್ಬನೇ ಯುವಕನ ಲವ್ ಸ್ಟೋರಿ ಇದು. ಕಡೆಗೆ ಯುವತಿಯೊಬ್ಬಳಿಗೆ ಇವನ ಪ್ರೇಮ ವ್ಯವಹಾರ ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನೋಯಿಡಾದ ಸೆಕ್ಟರ್ 3ರಲ್ಲಿ ನಡೆದಿದೆ.
ವಿಷಯ ತಿಳಿದುಕೊಂಡ ಉಳಿದ ಇಬ್ಬರು ಯುವತಿಯರು ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಅಲ್ಲಿ ಈ ಯುವಕ ತನ್ನನ್ನೇ ಮದುವೆಯಾಗಬೇಕು ಎಂದು ಮೂವರು ಯುವತಿಯರ ನಡುವೆ ವಾಗ್ವಾದ, ಜಗಳ ಶುರುವಾಗಿದೆ. ಒಂದು ಗಂಟೆ ಕಾಲ ನಡೆದ ಈ ಡ್ರಾಮಾದಲ್ಲಿ ಕಡೆಗೆ ಯುವಕನನ್ನು ದಂಡಿಸಿರುವ ಪೊಲೀಸರು ಯುವತಿಯರನ್ನು ಅವರ ಪೋಷಕರಿಗೆ ಒಪ್ಪಿಸಿದ್ದಾರೆ.
ಆರೋಪಿ ನೋಯಿಡಾದ ಸೆಕ್ಟರ್ 3ರ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದು, ಬುಲಂದ್‍ಶಹರ್ ಮೂಲದವ. ಯುವಕ ಲವ್ ಮಾಡುತ್ತಿರುವ ಮೂವರಲ್ಲಿ ಬುಲಂದರ್‌ಶಹರ್ ಮೂಲದ ಓರ್ವ ಯುವತಿಯೂ ಇದ್ದಾರೆ. ಇದರ ಜತೆಗೆ ನೋಯಿಡಾದಲ್ಲಿ ಉದ್ಯೋಗ ಮಾಡುವ ಕಂಪೆನಿಯ ಯುವತಿಯನ್ನೂ ಪ್ರೀತಿಸುತ್ತಿದ್ದ. ಕಳೆದ 7 ವರ್ಷಗಳಿಂದ ಅವರಿಬ್ಬರ ನಡುವೆ ಲಿವ್-ಇನ್-ಸಂಬಂಧ ಇತ್ತು.
ಎರಡನೇ ಯುವತಿ ತನ್ನ ಗೆಳತಿಯನ್ನು ಡಿಸೆಂಬರ್ 2017ರಲ್ಲಿ ಪರಿಚಯಿಸಿದ್ದಳು. ಲಿವ್-ಇನ್-ಸಂಬಂಧ ಹೊಂದಿದ್ದ ಯುವತಿಯ ಗೆಳತಿಯನ್ನೂ ಬುಟ್ಟಿಗೆ ಹಾಕಿಕೊಂಡಿದ್ದ ಯುವಕ, ಒಟ್ಟಿಗೆ ಮೂವರೊಂದಿಗೂ ಕದ್ದುಮುಚ್ಚಿ ಪ್ರೇಮ ಕಲಾಪ ನಡೆಸುತ್ತಿದ್ದ. ಈ ವಿಷಯ ಮೂವರು ಯುವತಿಯರಿಗೂ ಗೊತ್ತಿರಲಿಲ್ಲ. ಆದರೆ ಮೂವರು ಯುವತಿಯರ ನಡುವಿನ ಪ್ರೀತಿಯ ನಾಟಕವನ್ನು ಗೆಳೆಯನೊಬ್ಬ ತಿಳಿಸಿದ ಬಳಿಕ ಒಬ್ಬ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕಡೆಗೆ ನೋಯಿಡಾ ಸೆಕ್ಟರ್ 24ರ ಪೊಲೀಸ್ ಠಾಣೆಯಲ್ಲಿ ಮೂವರು ಯುವತಿಯರ ನಡುವೆ ಸುಮಾರು ಒಂದು ಗಂಟೆ ಕಾಲ ಜಗಳ ನಡೆದಿದೆ. ಈ ಯುವಕ ತನಗೆ ಸಲ್ಲಬೇಕಾದವನು ಎಂದು ಮೂವರು ಯುವತಿಯರು ಕಿತ್ತಾಡಿದ್ದಾರೆ. ಇವರನ್ನು ಸಮಾಧಾನಪಡಿಸಲು ಪೊಲೀಸರಿಗೆ ಸಾಕುಬೇಕಾಗಿದೆ. ಆ ಯುವತಿಯರಲ್ಲಿ ಒಬ್ಬರು ಬ್ಲೇಡ್‌ನಿಂದ ಗಾಯಗೊಳಿಸಿಕೊಂಡಿದ್ದು ಆಸ್ಪತ್ರೆಗೂ ದಾಖಲಾಗಿದ್ದಾರೆ.
Comments are closed.