ರಾಷ್ಟ್ರೀಯ

ಸಿಬಿಎಸ್‌ಇ ಸೋರಿಕೆ ತನಿಖೆ: ಇ-ಮೇಲ್‌ ಮೂಲ ಪತ್ತೆಗೆ ಗೂಗಲ್‌ ನೆರವು

Pinterest LinkedIn Tumblr


ಹೊಸದಿಲ್ಲಿ: ಹತ್ತನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಎಸ್‌ಇ ಮುಖ್ಯಸ್ಥರು ಇ-ಮೇಲ್‌ ಕಳುಹಿಸಿದ್ದಾರೆ ಎನ್ನಲಾದ ಇ-ಮೇಲ್‌ ವಿಳಾಸದ ವಿವರಗಳನ್ನು ದಿಲ್ಲಿಯ ಕ್ರೈಂಬ್ರಾಂಚ್‌ ಪೊಲೀಸರಿಗೆ ಒದಗಿಸಲು ಗೂಗಲ್‌ ಒಪ್ಪಿಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ.

ತನಿಖೆಗೆ ಸಹಕರಿಸುವುದಾಗಿ ಗೂಗಲ್‌ನಿಂದ ಪ್ರತಿಕ್ರಿಯೆ ಲಭ್ಯವಾಗಿರುವುದನ್ನು ದೃಢಪಡಿಸಿರುವ ಹಿರಿಯ ಪೊಲೀಸ್‌ ಅಧಿಕಾರಿ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಚಾತ್ರಾ ಜಿಲ್ಲೆಯಲ್ಲಿ ಮೊದಲ ಬಂಧನ ನಡೆದಿದೆ. ಖಾಸಗಿ ಕೋಚಿಂಗ್‌ ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಬಂಧಿಸಲಾಗಿದೆ. ಅಲ್ಲದೆ 10 ಮತ್ತು 12ನೇ ತರಗತಿಯ ಕೆಲವು ವಿದ್ಯಾರ್ಥಿಗಳನ್ನೂ ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ.

ದಿಲ್ಲಿಯಲ್ಲಿ ಸೋರಿಕೆಯ ಮೂಲವನ್ನು ಶೋಧಿಸಲು ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ. ಹಲವು ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿರುವ ಅಧಿಕಾರಿಗಳು ಇದುವರೆಗೆ 60ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ಆದರೆ ಮಹತ್ವದ ಪ್ರಗತಿಯೇನೂ ಕಂಡುಬಂದಿಲ್ಲ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಖ್ಯಸ್ಥೆ ಅನಿತಾ ಕರ್ವಾಲ್‌ ಅವರಿಗೆ 10ನೇ ತರಗತಿಯ ಗಣಿತ ಪರೀಕ್ಷೆಯ ಮುನ್ನಾದಿನ ಬಂದ ಇ-ಮೇಲ್‌ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿಸಿತ್ತು.

ಇ-ಮೇಲ್‌ ಕಳುಹಿಸಿದ ವ್ಯಕ್ತಿ ಗಣಿತ ಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿದ್ದು, ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿದ್ದರು. ಇ-ಮೇಲ್‌ನಲ್ಲಿ ಸೋರಿಕೆಯಾಗಿದೆ ಎನ್ನಲಾದ ಕೈ ಬರಹದ ಗಣಿತ ಪ್ರಶ್ನೆ ಪತ್ರಿಕೆಯ 12 ಚಿತ್ರಗಳನ್ನೂ ಅಡಕಗೊಳಿಸಲಾಗಿತ್ತು.

ಕಳುಹಿಸಿದ ವ್ಯಕ್ತಿಯ ಇ-ಮೇಲ್‌ ವಿಳಾಸದ ಪತ್ತೆಗೆ ಪೊಲೀಸರು ಗೂಗಲ್‌ಗೆ ಪತ್ರ ಬರೆದಿದ್ದರು. ಶುಕ್ರವಾರ ಮತ್ತೊಮ್ಮೆ ಜ್ಞಾಪನವನ್ನೂ ಕಳುಹಿಸಿದ್ದರು.

ಮಾರ್ಚ್‌ 27 ಮತ್ತು 28ರಂದು ದಿಲ್ಲಿ ಪೊಲೀಸರು 12ನೇ ತರಗತಿ ಅರ್ಥಶಾಸ್ತ್ರ ಮತ್ತು 10ನೇ ತರಗತಿ ಗಣಿತ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಸಿಬಿಎಸ್‌ಇ ಪ್ರಾದೇಶಿಕ ನಿರ್ದೇಶಕರ ದೂರು ಆಧರಿಸಿ ಎರಡು ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡಿದ್ದರು.

ಇಬ್ಬರು ಉಪ ಆಯುಕ್ತರು, ನಾಲ್ವರು ಸಹಾಯಕ ಕಮಿಷನರ್‌ಗಳು ಮತ್ತು ಐವರು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

Comments are closed.