ರಾಷ್ಟ್ರೀಯ

ಬಿಹಾರ ರ‍್ಯಾಂಕಿಂಗ್ ಹಗರಣ: ರ‍್ಯಾಂಕ್ ಕೊಡಿಸಿದ್ದವನ ಆಸ್ತಿ ಮುಟ್ಟುಗೋಲು

Pinterest LinkedIn Tumblr

ನವದೆಹಲಿ: ಬಿಹಾರ ಪರೀಕ್ಷೆ ರ‍್ಯಾಂಕಿಂಗ್ ಹಗರಣದ ಪ್ರಮುಖ ಆರೋಪಿಗೆ ಸೇರಿದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಬಿಹಾರದ ವಿಷ್ಣು ರಾಯ್ ಕಾಲೇಜಿನ ಪ್ರಾಂಶುಪಾಲ ಮತ್ತು ಕಾರ್ಯದರ್ಶಿ ಬಚ್ಚಾ ರಾಯ್‌ಗೆ ಸೇರಿದ ₹ 4.53 ಕೋಟಿ ಮೌಲ್ಯದ ಆಸ್ತಿಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

2016ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಹಣ ಪಡೆದು ಕೆಲವು ವಿದ್ಯಾರ್ಥಿಗಳಿಗೆ ಮೊದಲ ರ‍್ಯಾಂಕ್ ದೊರೆಯುವಂತೆ ಮಾಡಿದ ಆರೋಪ ರಾಯ್‌ ಮೇಲಿದೆ.

ಬಿಹಾರದ ವಿವಿಧೆಡೆ ಬಚ್ಚಾ ರಾಯ್ ಹೆಸರಿನಲ್ಲಿರುವ 16 ಫ್ಲ್ಯಾಟ್‌ಗಳು, ಆತನ ಪತ್ನಿ ಸಂಗೀತಾ ರಾಯ್ ಹೆಸರಿನಲ್ಲಿರುವ 13 ಫ್ಲ್ಯಾಟ್‌ಗಳನ್ನು, ರಾಯ್ ಪುತ್ರಿ ಶಾಲಿನಿ ರಾಯ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಒಂದು ಫ್ಲ್ಯಾಟ್ ಮತ್ತು ಎರಡು ಮಹಡಿಯ ಒಂದು ಬಂಗಲೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.

‘ರಾಜ್ಯಶಾಸ್ತ್ರ ಅಡುಗೆಗೆ ಸಂಬಂಧಿಸಿದ್ದು’: ‘2016ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ, ರೂಬಿ ರಾಯ್ ಎಂಬ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಳು.

ಸ್ಥಳೀಯ ಸುದ್ದಿ ವಾಹಿನಿಯೊಂದು ರೂಬಿಯ ಸಂದರ್ಶನ ನಡೆಸಿತ್ತು. ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಪಡೆದಿದ್ದ ರೂಬಿ, ‘ರಾಜ್ಯಶಾಸ್ತ್ರ ಅಡುಗೆಗೆ ಸಂಬಂಧಿಸಿದ್ದು’ ಎಂದು ಹೇಳಿದ್ದಳು. ಆ ವಿಡಿಯೊ ವೈರಲ್ ಆದ ನಂತರ ಪರೀಕ್ಷೆ ಮತ್ತು ಫಲಿತಾಂಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ಆರೋಪ ಕೇಳಿಬಂದಿತ್ತು.

ಬಿಹಾರ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದರು. ‘ನನ್ನನ್ನು ಪಾಸು ಮಾಡಿಸು ಎಂದಷ್ಟೇ ನಮ್ಮಪ್ಪನಿಗೆ ಹೇಳಿದ್ದೆ. ಆದರೆ ಅವರು ನನಗೆ ಮೊದಲ ರ‍್ಯಾಂಕ್‌ ಬರುವಂತೆ ಮಾಡಿದ್ದಾರೆ’ ಎಂದು ರೂಬಿ ಪೊಲೀಸರ ಎದುರು ಹೇಳಿಕೆ ನೀಡಿದ್ದರು.

ಈ ಪ್ರಕರಣದಲ್ಲಿ ರೂಬಿರಾಯ್‌ ಅವರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಹಣ ಪಡೆಯುತ್ತಿದ್ದ ಬಚ್ಚಾ ರಾಯ್, ಅವರಿಗೆ ಬೇಕಾದಂತೆ ಫಲಿತಾಂಶ ಕೊಡಿಸುವ ದಂಧೆ ನಡೆಸುತ್ತಿದ್ದುದ್ದನ್ನು ವಿಶೇಷ ತನಿಖಾ ತಂಡ ಪತ್ತೆ ಮಾಡಿತ್ತು.

‘ಬಚ್ಚಾ ರಾಯ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರ‍್ಯಾಂಕಿಂಗ್ ಹಗರಣ ಬಹಿರಂಗವಾದ ಸಂದರ್ಭದಲ್ಲೇ ಬಚ್ಚಾ ರಾಯ್ ಆದಾಯ ಲೆಕ್ಕಪತ್ರ ವಿವರ ಸಲ್ಲಿಸಿದ್ದರು. ಅದರಲ್ಲಿ ಕೃಷಿ ಮೂಲದ ಆದಾಯವನ್ನು ಹಿಂದಿನ ಸಾಲಿಗಿಂತ ಶೇ 70ರಷ್ಟು ಹೆಚ್ಚಿಗೆ ನಮೂದಿಸಿದ್ದರು. ಅವರು ಖರೀದಿಸಿರುವ 30 ಫ್ಲ್ಯಾಟ್‌ಗಳಿಗೆ ಪಾವತಿ ಮಾಡಲು ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಯೇ ಇಲ್ಲ’ ಎಂದು ಇ.ಡಿ ವಿವರಿಸಿದೆ.

ತನಿಖಾ ತಂಡದ ವರದಿ ಆಧರಿಸಿ ಜಾರಿ ನಿರ್ದೇಶನಾಲಯವು, ಈ ದಂಧೆಯಲ್ಲಿ ಪಾಲುದಾರರಾಗಿದ್ದ ಬೇರೆ–ಬೇರೆ ಕಾಲೇಜುಗಳ ನಾಲ್ವರು ಪ್ರಾಂಶುಪಾಲರು, ಕೆಲವು ಅಧಿಕಾರಿಗಳೂ ಸೇರಿ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆ ಇನ್ನೂ ನಡೆಯುತ್ತಿದೆ.

*‌
ಬಚ್ಚಾ ರಾಯ್ ತಮ್ಮ ಕುಟುಂಬದ ಹೆಸರಿನಲ್ಲೇ ಒಂದು ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಅಕ್ರಮ ಹಣದಲ್ಲಿ 30 ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾರೆ. ಆ ಹಣದ ಮೂಲದ ಮಾಹಿತಿ ನೀಡಿಲ್ಲ.
–ಜಾರಿ ನಿರ್ದೇಶನಾಲಯ

Comments are closed.