ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ಕುರಿತ ಮೋದಿ ಹೇಳಿಕೆಗೆ ಪಾಕ್ ಟೀಕೆ; ಸುಳ್ಳನ್ನು ಪದೇ ಪದೇ ಹೇಳಿದ ಮಾತ್ರಕ್ಕೆ ಸತ್ಯವಾಗಲ್ಲ ಎಂದ ಪಾಕ್

Pinterest LinkedIn Tumblr

ಇಸ್ಲಾಮಾಬಾದ್ (ಪಾಕಿಸ್ತಾನ): “ಒಂದೇ ಸುಳ್ಳನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವುದಿಲ್ಲ” 2016ರಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಪಾಕಿಸ್ತಾನ ಹೇಳಿಕೆ ಬಿಡುಗಡೆ ಮಾಡಿದೆ.

“ಪ್ರಧಾನಿ ನರೇಂದ್ರ ಮೋದಿ ಸುಳ್ಳು ಮತ್ತು ಆಧಾರರಹಿತ ಮಾತುಗಳನ್ನಾಡುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಕುರಿತು ಅವರು ಹೇಳಿದ ವಿವರಗಳು ಸತ್ಯಕ್ಕೆ ದೂರವಾಗಿದೆ” ಪಾಕಿಸ್ತಾನ ಹೇಳಿದೆ.

ಲಂಡನ್ ನಲ್ಲಿ ’ಭಾರತ್ ಕಿ ಬಾತ್ ಸಬ್ ಕಾ ಸಾಥ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ “ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸಂಬಂಧ ಮಾದ್ಯಮಗಳಿಗೆ ವಿವರ ಬಹಿರಂಗಪಡಿಸುವುದಕ್ಕೆ ಮುನ್ನ ಪಾಕಿಸ್ತಾನದೊಡನೆ ಮಾಹಿತಿ ಹಂಚಿಕೊಳ್ಳಲು ಉತ್ಸುಕರಾಗಿದ್ದೆವು.

“ಸರ್ಜಿಕಲ್ ಕಾರ್ಯಾಚರಣೆ ನಡೆದ ರಾತ್ರಿ 11ರ ಸುಮಾರಿಗೆ ನಾವು ಪಾಕಿಸ್ತಾನಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದೆವು. ಆದರೆ ಅವರು ಮಾತ್ರ ಕರೆ ಸ್ವೀಕರಿಸಲು ಭಯಗೊಂಡಿದ್ದರು. ಕಡೆಗೆ ತಡರಾತ್ರಿ 12ಕ್ಕೆ ನಾವು ಅವರಿಗೆ ಕಾರ್ಯಾಚರಣೆಯ ಮಾಹಿತಿ ನೀಡಿದೆವು. ಆ ನಂತರವೇ ಭಾರತೀಯ ಮಾದ್ಯಮಗಳಿಗೆ ತಿಳಿಸಲಾಗಿತ್ತು” ಎಂದರು.

ಪ್ರಧಾನಿ ಮೋದಿ ಹೇಳಿರುವ ಸರ್ಜಿಕಲ್ ಸ್ಟ್ರೈಕ್ ಬಗೆಗಿನ ಮಾತುಗಳು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.

“ಸುಳ್ಳೊಂದನ್ನು ಪುನಃ ಪುನಃ ಹೇಳಿದ ಮಾತ್ರಕ್ಕೆ ಅದು ಸತ್ಯವಾಗುವುದಿಲ್ಲ” ವಕ್ತಾರರು ಹೇಳಿದರು.

ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತದೆ ಎನ್ನುವ ಮೋದಿ ಅವರ ಮಾತಿಗೆ ಪ್ರತಿಕ್ರಯಿಸಿದ ಪಾಕ್ ವಕ್ತಾರ “ಭಾರತವು ಪಾಕಿಸ್ತಾನದಲ್ಲಿ ಗುಪ್ತಚರರನ್ನು ಕಳಿಸಿ ಭಯೋತ್ಪಾದನೆ ನಡೆಸುತ್ತಿದೆ. ಭಾರತೀಯ ಗುಪ್ತಚರನಾದ ಕುಲಭೂಷಣ್ ಜಾಧವ್ ಇದಕ್ಕೆ ಸಾಕ್ಷಿ. ” ಎಂದರು.

ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಭಾರತೀಯ ಕುಲಭೂಷಣ್ ಜಾಧವ್(47) ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆ ವಿಧಿಸಲಾಗಿದೆ.

Comments are closed.