ಹೊಸದಿಲ್ಲಿ: ಮತಗಿಟ್ಟಿಸಬೇಕೆಂದರೆ ಬಡವರ ಮಕ್ಕಳನ್ನು ದತ್ತು ಪಡೆಯಿರಿ ಎಂದು ಮಧ್ಯಪ್ರದೇಶದ ರಾಜ್ಯಪಾಲೆ, ಗುಜರಾತಿನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಬಿಜೆಪಿ ಹೈ ಕಮಾಂಡ್ ಕಣ್ಣು ಕೆಂಪಗಾಗಿಸಿದೆ.
ಚಿತ್ರಕೂಟದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನ್ನಾಡುತ್ತಿರುವ ಬೆನ್, ಚುನಾವಣೆಯಲ್ಲಿ ಬಿಜೆಪಿಗೆ ಮತ ಬೀಳಬೇಕೆಂದರೆ ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ ಎಂದು ಸಲಹೆ ನೀಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಈ ವಿಡಿಯೋ ಚಿತ್ರೀಕರಣವಾಗಿರುವ ದಿನಾಂಕ ಯಾವುದೆಂದು ಸ್ಪಷ್ಟವಾಗಿಲ್ಲ.
“ನಿಮಗೆ ಮತ ಬೇಕೆಂದರೆ ಪ್ರತಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ. ಬಡ ಮಕ್ಕಳ ಜತೆ ಬೆರೆಯಿರಿ. ಅವರನ್ನು ನಿಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಿ. ಅವರಿಗೆ ಪ್ರೀತಿ- ಕಾಳಜಿಯನ್ನು ತೋರಿಸಿ. ಅವರನ್ನು ದತ್ತು ಪಡೆದುಕೊಂಡು ಎಲ್ಲ ಅಗತ್ಯಗಳನ್ನು ಪೂರೈಸಿ. ಹೀಗೆ ಮಾಡಿದರೆ ಮಾತ್ರ ನಿಮಗೆ ಮತ ಸಿಗೋದು. ನರೇಂದ್ರ ಮೋದಿ ಅವರ ಕನಸು ಸಾಕಾರವಾಗುವುದು “, ಎಂದು ಅವರು ಹೇಳಿದ್ದಾರೆ.
ಆನಂದಿ ಬೆನ್ ಅವರ ಈ ಮಾತುಗಳೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Comments are closed.