ರಾಷ್ಟ್ರೀಯ

ವಿದೇಶಿ ದೇಣಿಗೆ ಬಗ್ಗೆ 3,292 ಎನ್ ಜಿಒಗಳು, ಸಂಸ್ಥೆಗಳು ಬಹಿರಂಗಪಡಿಸಿಲ್ಲ: ಸರ್ಕಾರ

Pinterest LinkedIn Tumblr

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಜೆಎನ್ ಯು, ಇಗ್ನೋ, ಐಐಟಿ ದೆಹಲಿ ಮತ್ತು ಮದ್ರಾಸ್, ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಸೇರಿದಂತೆ ಸುಮಾರು 3,292 ಎನ್ ಜಿಒ ಮತ್ತು ಸಂಸ್ಥೆಗಳಿಗೆ ವಾರ್ಷಿಕ ವಿದೇಶಿ ದೇಣಿಗೆ ಮತ್ತು ಖರ್ಚುಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.

ಗೃಹ ಸಚಿವಾಲಯ ಎನ್ ಜಿಒ ಮತ್ತು ಸಂಸ್ಥೆಗಳಿಗೆ ನೀಡಿರುವ ನೊಟೀಸ್ ನಲ್ಲಿ, 2011-12ನಿಂದ 2016-17ರ ದಾಖಲೆಗಳನ್ನು ಪರಿಶೀಲಿಸಿದ ನಂತರ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ವಿದೇಶಗಳಿಂದ ಬಂದಿರುವ ದೇಣಿಗೆ ವಿವರಗಳನ್ನು ಹಲವು ಬಾರಿ ಅವಕಾಶಗಳನ್ನು ನೀಡಿದರೂ ಕೂಡ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇನ್ಫೋಸಿಸ್ ಫೌಂಡೇಶನ್, ದೆಹಲಿ ಯೂನಿವರ್ಸಿಟಿ, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯ, ರಾಜಸ್ತಾನ ವಿ.ವಿ, ಮದ್ರಾಸ್ ಕ್ರಿಸ್ತಿಯನ್ ಕಾಲೇಜು, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ದೆಹಲಿ ಮತ್ತು ಮದ್ರಾಸ್ ಭಾರತೀಯ ತಾಂತ್ರಿಕ ಸಂಸ್ಥೆ ಮೊದಲಾದ ಸಂಸ್ಥೆಗಳಿವೆ.

ಸಚಿವಾಲಯದ ಪಟ್ಟಿಯಲ್ಲಿರುವ ನೊಟೀಸ್ ನಲ್ಲಿ ವಾರ್ಷಿಕ ಐಟಿ ರಿಟರ್ನ್ಸ್ ಸಲ್ಲಿಸದಿರುವ ಸಂಸ್ಥೆಗಳು ತಕ್ಷಣವೇ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಬೇಕು. ಈ ನೊಟೀಸ್ ನೀಡಿದ 15 ದಿನಗಳೊಳಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಈ ಅವಧಿಯೊಳಗೆ ವಿದೇಶಿ ದೇಣಿಗೆ ಬಗ್ಗೆ ವಾರ್ಷಿಕ ರಿಟರ್ನ್ ಸಲ್ಲಿಸದಿದ್ದರೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ, 2010ರ ಸೆಕ್ಷನ್ 10ರಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ದಾಖಲಿಸದಿದ್ದರೆ ವಿದೇಶಗಳಿಂದ ದೇಣಿಗೆ ಪಡೆಯಲು ಯಾವುದೇ ಸಂಘಟನೆಗಳಿಗೆ ಅವಕಾಶ ನೀಡಲಾಗುವುದಿಲ್ಲ.

Comments are closed.