ರಾಷ್ಟ್ರೀಯ

ಕಳೆದ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳ 23 ಸಾವಿರ ಬ್ಯಾಂಕ್ ವಂಚನೆ ಕೇಸುಗಳು: ಆರ್ ಬಿಐ

Pinterest LinkedIn Tumblr

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹಲವಾರು ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವಂಚನೆ ಮಾಡಿರುವ 23,000ಕ್ಕೂ ಅಧಿಕ ಕೇಸುಗಳು ವರದಿಯಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

2016-17ರಲ್ಲಿ 5,000ಕ್ಕೂ ಅಧಿಕ ವಂಚನೆ ಪ್ರಕರಣಗಳು ವರದಿಯಾದರೆ, ಏಪ್ರಿಲ್ 2017ರಿಂದ ಮಾರ್ಚ್ 1, 2018ರವರೆಗೆ ಒಟ್ಟು 5,152 ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್ ಟಿಐ ಉತ್ತರದಲ್ಲಿ ಹೇಳಲಾಗಿದೆ.

ಏಪ್ರಿಲ್ 2017ರಿಂದ ಮಾರ್ಚ್ 1, 2018ರವರೆಗೆ 28,459 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ವರದಿಯಾಗಿದೆ ಎಂದು ಆರ್ ಬಿಐ ತಿಳಿಸಿದೆ.

2016-17ರಲ್ಲಿ 5,076 ಬ್ಯಾಂಕ್ ವಂಚನೆ ಕೇಸುಗಳು ವರದಿಯಾಗಿದ್ದು 23,933 ಕೋಟಿ ರೂಪಾಯಿ ವಂಚನೆ ಒಳಗೊಂಡಿದೆ.

2013ರಿಂದ ಮಾರ್ಚ್ 1, 2018ರವರೆಗೆ 1 ಲಕ್ಷ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು 23,866 ಕೇಸುಗಳು ವರದಿಯಾಗಿವೆ. ಒಟ್ಟು 1,00,718 ಕೋಟಿ ರೂಪಾಯಿ ಎಲ್ಲಾ ಕೇಸುಗಳನ್ನು ಸೇರಿಸಿದರೆ ಆಗುತ್ತದೆ ಎಂದು ಆರ್ ಟಿಐಯಲ್ಲಿ ಹೇಳಲಾಗಿದೆ.

ಇಂತಹ 4,693 ಕೇಸುಗಳು ಮತ್ತು 4,639 ಕೇಸುಗಳು 2015-16 ಮತ್ತು 2014-15ರಲ್ಲಿ ವರದಿಯಾಗಿವೆ ಎಂದು ಆರ್ ಬಿಐ ಹೇಳಿದೆ. 2013-14ರಲ್ಲಿ ಬ್ಯಾಂಕುಗಳಲ್ಲಿ 4,306 ವಂಚನೆ ಕೇಸುಗಳು ವರದಿಯಾಗಿದ್ದು 10,170 ಕೋಟಿ ರೂಪಾಯಿ ಒಳಗೊಂಡಿದೆ ಎಂದು ಆರ್ ಬಿಐ ತಿಳಿಸಿದೆ.

ಉಲ್ಲೇಖಿತ ವಂಚನೆ ಕೇಸುಗಳನ್ನು ಪರಿಷ್ಕರಿಸಿ ವಾಸ್ತವಾಂಶ ಮತ್ತು ವೈಯಕ್ತಿಕ ಕೇಸುಗಳ ಪರಿಸ್ಥಿತಿಗಳಿಗನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರ್ ಬಿಐ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಉದ್ಯಮಿಗಳು ಭಾಗಿಯಾಗಿರುವ ಬೃಹತ್ ಮೊತ್ತದ ಬ್ಯಾಂಕ್ ವಂಚನೆ ಕೇಸುಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಅಂಕಿಅಂಶಗಳು ಭಾರೀ ಮಹತ್ವ ಪಡೆದಿವೆ.

ಬ್ಯಾಂಕು ವಂಚನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪಂಜಾಬ್ ನ್ಯಾಷನಲ್ ಬ್ಯಾಂಕಿನ 13,000 ಕೋಟಿ ರೂಪಾಯಿಗಳ ವಂಚನೆ ಪ್ರಕರಣ. ಸಿಬಿಐ ಇತ್ತೀಚೆಗೆ ಸಾರ್ವಜನಿಕ ವಲಯ ಬ್ಯಾಂಕಾದ ಐಡಿಬಿಐ ಬ್ಯಾಂಕಿನ ಮಾಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ, ಮಾಜಿ ಏರ್ ಸೆಲ್ ಪ್ರವರ್ತಕ ಸಿ. ಶಿವಶಂಕರನ್, ಅವರ ಪುತ್ರ ಬ್ಯಾಂಕಿನಿಂದ 600 ಕೋಟಿ ರೂಪಾಯಿ ಸಾಲ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಿದೆ.

Comments are closed.