ರಾಷ್ಟ್ರೀಯ

ದಲಿತನ ಮನೆಯಲ್ಲಿ ಹೊರಗಿನ ಮೃಷ್ಟಾನ್ನ ಭೋಜನ ಸವಿದ ಬಿಜೆಪಿ ಸಚಿವ ರಾಣಾ

Pinterest LinkedIn Tumblr


ಲಕ್ನೋ : ದಲಿತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಅಲ್ಲಿನ ಮನೆಯವರೊಂದಿಗೆ ಮನೆಯೂಟ ಸ್ವೀಕರಿಸುವ ಕಾರ್ಯಕ್ರಮ ಹಾಕಿಕೊಂಡಿರುವ ಉ.ಪ್ರದೇಶ ಸಚಿವ, ಬಿಜೆಪಿ ನಾಯಕ ಸುರೇಶ್‌ ರಾಣಾ ಅವರು ದಲಿತನ ಮನೆ ಅಡುಗೆಯ ಬದಲು ಕೇಟರರ್‌ಗಳಿಂದ ತರಿಸಿಕೊಂಡ ಮೃಷ್ಟಾನ್ನ ಭೋಜನವನ್ನು ಸ್ವೀಕರಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.

ದಲಿತನ ಮನೆಯಲ್ಲಿ ರಾಣಾ ಸವಿದಿರುವ ಮೃಷ್ಟಾನ್ನ ಭೋಜನದಲ್ಲಿ ಮೂರು ಬಗೆಯ ಪನೀರ್‌ ಪಲ್ಯ, ಪುಲಾವ್‌, ಗುಲಾಬ್‌ ಜಾಮೂನ್‌ ಮತ್ತು ಮಿನರಲ್‌ ವಾಟರ್‌ ಇತ್ತೆನ್ನುವುದು ವಿಶೇಷ.

ಸಚಿವ ರಾಣಾ ದಲಿತನ ಮನೆಯಲ್ಲಿ ಸವಿದಿರುವ ಕೇಟರಿಂಗ್‌ನ ಮೃಷ್ಟಾನ್ನ ಭೋಜನದ ಫ‌ುಲ್‌ ಲಿಸ್ಟ್‌ ಹೀಗಿದೆ : ಪಾಲಕ್‌ ಪನೀರ್‌, ಇನ್ನೆರಡು ಬಗೆಯ ಪನೀರ್‌ ಪಲ್ಯ, ಪುಲಾವ್‌, ಗುಲಾಬ್‌ ಜಾಮೂನು, ರಾಜ್‌ಮಾ, ದಾಲ್‌ ತಡ್‌ಕಾ, ತಂದೂರಿ ರೋಟಿ, ಸಲಾಡ್‌ ಮತ್ತು ರಾಯ್ತ !

ಸಚಿವ ರಾಣಾ ಮೃಷ್ಟಾನ್ನ ಭೋಜನ ಸವಿದಿರುವ ಮನೆಯ ಮಾಲಕ ರಜನೀಶ್‌ ಕುಮಾರ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಸಚಿವರು ನಮ್ಮ ಮನೆಗೆ ಊಟಕ್ಕೆ ಬರುತ್ತಾರೆ ಎಂಬ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಅವರೆಲ್ಲ ದೀಢೀರನೆ ಬಂದರು. ಹಾಗಾಗಿ ನಾವು ಬೇರೆ ಉಪಾಯವೇ ಇಲ್ಲದೆ ಹೊರಗಿನಿಂದ ಆಹಾರ, ನೀರು, ಕಟ್ಲೆರಿ ಇತ್ಯಾದಿಗಳನ್ನು ತರಿಸಿಕೊಂಡೆವು’ ಎಂದು ಹೇಳಿದರು.

ಆದರೆ ಕೊನೆಗೆ ಗ್ರಾಮಸ್ಥರು ಮಾಧ್ಯಮದೊಂದಿಗೆ ಮಾತನಾಡಿ “ಸಚಿವರ ತಂಡದವರೇ ಗ್ರಾಮದ ಹಲ್ವಾಯಿಯಿಂದ ಆಹಾರ ವೈವಿಧ್ಯಗಳನ್ನು ಆರ್ಡರ್‌ ಮಾಡಿ ತರಿಸಿಕೊಂಡರು’ ಎಂದು ಹೇಳಿದರು.

ಸಚಿವ ರಾಣಾ ಅವರು ದಲಿತನ ಮನೆಗೆ ತಾವು ಭೇಟಿ ನೀಡುವ ಕಾರ್ಯಕ್ರಮ ಮನೆಯವರಿಗೆ ತಿಳಿದೇ ಇತ್ತು ಎಂದು ಹೇಳಿದರು. ಬಿಜೆಪಿ ನಾಯಕರು ರೆಸ್ಟೋರೆಂಟ್‌ನಿಂದ ತರಿಸಿಕೊಂಡ ಮೃಷ್ಟಾನ್ನ ಭೋಜನವನ್ನು ಸವಿಯುವ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು ಅದೀಗ ವೈರಲ್‌ ಆಗಿದೆ.

ಈ ಘಟನೆ ನಡೆದದ್ದು ಕಳೆದ ಸೋಮವಾರ ರಾತ್ರಿ ಆಲಿಗಢದ ಲೋಹಗಢ ಗ್ರಾಮದಲ್ಲಿ – ಬಿಜೆಪಿ ನಾಯಕರು, ಸಚಿವರು ದಲಿತರ ಮನೆಗೆ ಅಚ್ಚರಿಯ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ! ದಲಿತರನ್ನು ಅವರ ಮನೆಯಲ್ಲೇ ಭೇಟಿಯಾಗಿ ಅವರನ್ನು ಆತ್ಮೀಯವಾಗಿ ತಲುಪಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಣತಿಯಂತೆ ಈ ಉತ್ತರ ಪ್ರದೇಶದಲ್ಲಿ “ದಲಿತ ಮನೆ ಮನೆ ಭೇಟಿ” ಕಾರ್ಯಕ್ರಮವನ್ನು ಬಿಜೆಪಿ ನಾಯಕರು ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.