ರಾಷ್ಟ್ರೀಯ

‘ಬಂಧನ ಪ್ರಕ್ರಿಯೆ ಅಷ್ಟು ಸುಲಭವಾಗಬಾರದು’; ಎಸ್‌ಸಿ/ಎಸ್‌ಟಿ ಕಾಯ್ದೆ ತೀರ್ಪು ತಡೆಗೆ ಸುಪ್ರೀಂ ನಕಾರ

Pinterest LinkedIn Tumblr


ಹೊಸದಿಲ್ಲಿ: ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪ ಬಂದ ತಕ್ಷಣ ಆರೋಪಕ್ಕೆ ಗುರಿಯಾದ ವ್ಯಕ್ತಿಯ ಕಡ್ಡಾಯ ಬಂಧನದ ನಿಯಮವನ್ನು ಸರಳಗೊಳಿಸಿದ ಮಾರ್ಚ್‌ 20ರ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ತೀರ್ಪು ಶಾಸಕಾಂಗದ ಕಾರ್ಯವ್ಯಾಪ್ತಿಯ ಅತಿಕ್ರಮಣ ಹಾಗೂ ಕಾನೂನಿನ ತಿದ್ದುಪಡಿಯಾಗುತ್ತದೆ ಎಂಬ ಕೇಂದ್ರ ಸರಕಾರದ ವಾದವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ತೀರ್ಪಿನಲ್ಲಿ ಬಳಸಿದ ಕಟುವಾದ ಪದಗಳು ಸಾಂವಿಧಾನಿಕ ಅಧಿಕಾರ ಹಂಚಿಕೆಯ ಮೇಲಿನ ಪ್ರಹಾರವಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ವಾದ ಮಂಡಿಸಿದರು. ಆದರೆ ಸುಪ್ರೀಂ ಕೋರ್ಟ್‌ ಅದನ್ನು ಒಪ್ಪದೆ ಮುಂದಿನ ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಿತು.

‘ನಮ್ಮ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕ ಅಧಿಕಾರಗಳನ್ನು ಹಂಚಿದೆ. ಆದರೆ ಈ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಕಾನೂನನ್ನು ಬದಲಿಸಿರುವುದಲ್ಲದೆ ಆರೋಪಿಗೆ ನಿರೀಕ್ಷಣಾ ಜಾಮೀನಿಗೆ ಅವಕಾಶ ಮಾಡಿಕೊಟ್ಟಿದೆ. ಅದು ಮೂಲ ಕಾಯ್ದೆಯಲ್ಲಿಲ್ಲ. ಡಿಎಸ್‌ಪಿ ಪ್ರಾಥಮಿಕ ವಿಚಾರಣೆ ನಡೆಸದೆ ಆರೋಪ ಪಟ್ಟಿ ದಾಖಲಿಸಿದಲ್ಲಿ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದೂ ಕೋರ್ಟ್ ಹೇಳಿದೆ. ಇದರಿಂದ ಶಾಸಕಾಂಗದ ಅಧಿಕಾರದ ಅತಿಕ್ರಮಣವಾದಂತಾಗಿದೆ’ ಎಂದು ವೇಣುಗೋಪಾಲ್‌ ವಾದಿಸಿದರು.

‘ಈ ತೀರ್ಪು ಇಡೀ ದೇಶವನ್ನೇ ಅಲುಗಾಡಿಸಿದೆ. ಸರಿಯೋ, ತಪ್ಪೋ, ಉದ್ರಿಕ್ತ ಜನರ ಪ್ರತಿಭಟನೆಗೆ ಎಂಟು ಜೀವಗಳು ಬಲಿಯಾಗಿವೆ. ಸಾವಿರಾರು ವರ್ಷಗಳಿಂದ ದಮನಕ್ಕೊಳಗಾದವರು ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂಬ ಭಾವನೆ ಹೊಂದಿದ್ದಾರೆ’ ಎಂದು ಅವರು ಪ್ರತಿಪಾದಿಸಿದರು.

ನ್ಯಾಯಮೂರ್ತಿ ಆದರ್ಶ್‌ ಕೆ. ಗೋಯೆಲ್‌ ಮತ್ತು ಉ.ಯು. ಲಲಿತ್‌ ಅವರ ಪೀಠ, ಮಾರ್ಚ್‌ 20ರ ತೀರ್ಪು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂಬ ಸರಕಾರದ ವಾದವನ್ನು ತಳ್ಳಿಹಾಕಿತು.

‘ಅಪರಾಧಿಯನ್ನು ಶಿಕ್ಷಿಸದೆ ಬಿಟ್ಟುಬಿಡಿ ಎಂದು ನಾವೆಲ್ಲೂ ಹೇಳಿಲ್ಲ. ಆರೋಪಿ ಯಾವುದೇ ರೀತಿಯ ಹಿಂಸಾತ್ಮಕ ಕೃತ್ಯ ನಡೆಸಿದ್ದರೆ, ಅದು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಬರುವಂತಿದ್ದರೆ, ಪೊಲೀಸ್‌ ಅಧಿಕಾರಿಗಳು ಪ್ರಾಥಮಿಕ ವಿಚಾರಣೆಯನ್ನೂ ನಡೆಸದೆ ಆರೋಪಿಯನ್ನು ನೇರವಾಗಿ ಬಂಧಿಸುವುದು ಸರಿಯಲ್ಲ ಎಂದಷ್ಟೇ ಹೇಳಿದ್ದೇವೆ. ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಿ ಎಂದು ನಾವೆಲ್ಲೂ ಹೇಳಿಲ್ಲ. ದುರುದ್ದೇಶಪೂರಿತ ದೂರುಗಳಿಂದ ಅಮಾಯಕರನ್ನು ರಕ್ಷಿಸಿ. ಬಂಧನಕ್ಕಿರುವ ಮಾರ್ಗದರ್ಶಿ ಸೂತ್ರಗಳನ್ನು ಸರಿಯಾಗಿ ಪಾಲಿಸಿ ಎಂದಿದ್ದೇವೆ. ಅಷ್ಟೇ ಹೊರತು ಕಾಯ್ದೆಯ ಯಾವ ಅಂಶವನ್ನೂ ನಾವು ಬದಲಿಸಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

‘ಭಯೋತ್ಪಾದನೆ ನಿಗ್ರಹ ಕಾಯ್ದೆಯಲ್ಲೂ ಜಾಮೀನಿಗೆ ಅವಕಾಶವಿಲ್ಲ. ಆದರೆ ಅದು ಬೇರೆ ರೀತಿಯ ಅಪರಾಧಗಳಿಗೆ ಸಂಬಂಧಿಸಿದ್ದು. ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲೂ ಅದೇ ರೀತಿ ಜಾಮೀನಿಗೆ ಅವಕಾಶವಿಲ್ಲದಂತೆ ಬಳಸಲು ಸಾಧ್ಯವಿಲ್ಲ. ಆರೋಪಿಗೆ ಜಾಮೀನು ನಿರಾಕರಿಸುವುದರಿಂದ ಶಾಸಕಾಂಗ ಸಾಧಿಸುವುದಾದರೂ ಏನು? ಯಾರನ್ನೇ ಆದರೂ ಬಂಧಿಸುವುದು ಅಷ್ಟು ಸುಲಭದ ಸಂಗತಿಯಾಗಬಾರದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡಲಾಗಿದೆ’ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

Comments are closed.