ಗುಂಟೂರು: ದೇಶಾದ್ಯಂತ ಸುದ್ದಿಯಾದ ಗುಂಟೂರು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
9 ವರ್ಷದ ಸಂತ್ರಸ್ತೆಯನ್ನು ದಾಖಲಿಸಿರುವ ಗುಂಟೂರು ಸರಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಅವರು, ಬಾಲಕಿಯ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ನನ್ನದು. ಈ ಕುರಿತು ಜಿಲ್ಲಾಧಿಕಾರಿ ಬಳಿ ಈಗಾಗಲೇ ಮಾತನ್ನಾಡಿದ್ದು ಆಕೆಗೆ ಉತ್ತಮ ಶಾಲೆಯಲ್ಲಿ ಪ್ರವೇಶಾತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಭವಿಷ್ಯದಲ್ಲಿ ಆಕೆ ಏನನ್ನು ಓದಲು ಬಯಸಿದರು ಕೂಡ ನಾನು ಅದರ ವೆಚ್ಚವನ್ನು ಭರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದರ ಜತೆಗೆ ಈಗಾಗಲೇ ಘೋಷಿಸಿರುವ 5 ಲಕ್ಷ ರೂಪಾಯಿ ಪರಿಹಾರ ಧನದ ಹೊರತಾಗಿ, ಆಕೆಯ ಪರಿವಾರ ಹೆಸರಲ್ಲಿ 5 ಲಕ್ಷ ಫಿಕ್ಸ್ಡ್ ಡೆಪಾಸಿಟ್ ಇಡಲಾಗುವುದು ಎಂದು ಹೇಳಿದ್ದಾರೆ.
ಅತ್ಯಾಚಾರ ಪಿಡುಗು ಬೆಳೆಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಅವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು. ಆಂಧ್ರ ಪ್ರದೇಶದಲ್ಲಿ ಅತ್ಯಾಚಾರಿಗಳಿಗೆ ಜಾಗವಿಲ್ಲ. ಹೆಣ್ಣು ಮಕ್ಕಳು ಅಥವಾ ಮಹಿಳೆಯರನ್ನು ಸ್ಪರ್ಶಿಸುವ ಧೈರ್ಯ ಮಾಡಿದರೆ, ಅಂತವನಿಗೆ ಅದು ಕೊನೆಯ ದಿನವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಫೋರ್ನ್ ಸೈಟ್‌ಗಳು ಉಚಿತವಾಗಿ ಲಭ್ಯವಾಗುತ್ತಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಇದನ್ನು ತಡೆಯಲು ಕಠಿಣ ಕಾನೂನು ಜಾರಿಯಾಗಬೇಕಿದೆ ಎಂದರು.
ಬುಧವಾರ ಗುಂಟೂರಿನಲ್ಲಿ ನಡೆದ 9 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಪೂರ್ಣ ಆಂಧ್ರಪ್ರದೇಶವನ್ನು ಬೆಚ್ಚಿ ಬೀಳಿಸಿತ್ತು. ಬಾಲಕಿಯ ನೆರೆಮನೆಯವನಾಗಿದ್ದ 60 ವರ್ಷದ ಸುಬ್ಬಯ್ಯ ಎಂಬ ವೃದ್ಧ ಚಾಕ್ಲೇಟ್ ಆಮಿಷ ಒಡ್ಡಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ.
ಕೃತ್ಯ ನಡೆದ ಎರಡು ದಿನಗಳ ಬಳಿಕ ಆರೋಪಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಾನು ಮಾಡಿದ ಕೃತ್ಯ ಬಹಿರಂಗವಾಗುತ್ತಿದ್ದಂತೆ ಅಪಮಾನ ಸಹಿಸಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
Comments are closed.