ಬೆಂಗಳೂರು: ‘2019 ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದಿಲ್ಲ,ನಾನೇ ಪ್ರಧಾನಿಯಾಗಿ ಆಯ್ಕೆಯಾಗುತ್ತೇನೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಈ ಹೇಳಿಕೆ ನೀಡಿದ್ದಾರೆ.
‘ಬಿಜೆಪಿಯವರು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿದ್ದಾರೆ.ಪ್ರಧಾನಿ ಮೋದಿ ಅವರು ನಿರಂತರವಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಪ್ರಶ್ನೆ ಏನೆಂದರೆ ಯಾಕೆ ಭ್ರಷ್ಟ, ಜೈಲು ಪಾಲಾಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದ್ದೀರಿ ? ಯಾಕೆ ಸ್ವಚ್ಛ ಚಾರಿತ್ರ್ಯ ಉಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಿಲ್ಲ? 35 000 ಕೋಟಿ ರಾಜ್ಯದ ಹಣ ಲೂಟಿ ಹೊಡೆದ ಗಣಿ ಉದ್ಯಮಿಗಳನ್ನೇಕೆ ಪಕ್ಷದಲ್ಲಿ ಉಳಿಸಿಕೊಂಡಿದ್ದೀರಿ? ಯುವಜನರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಅಂದಿದ್ದೀರಲ್ಲ, ಸದ್ಯ ದೇಶದಲ್ಲಿ ಅತೀ ಹೆಚ್ಚಿನ ನಿರುದ್ಯೋಗ ಇರುವ ದಾಖಲೆ ನಿರ್ಮಾಣವಾಗಿದೆ. ಯಾಕೆ ಉದ್ಯೋಗ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು,ಪ್ರಧಾನಿ ಉತ್ತರ ನೀಡಲಿ ಎಂದರು.
ರಾಫೇಲ್ ಡೀಲ್ ಬಗ್ಗೆಯೂ ಪ್ರಶ್ನಿಸಿ ‘ಎಚ್‌ಎಎಲ್ ಕರ್ನಾಟಕದ್ದು, ಈ ಹಗರಣದ ಮೂಲಕ ಕನ್ನಡಿಗರಿಗೆ ಪ್ರಧಾನಿ ಮೋಸ ಮಾಡಿದ್ದಾರೆ’ ಎಂದು ಕಿಡಿ ಕಾರಿದರು.
Comments are closed.