ರಾಷ್ಟ್ರೀಯ

ಲೋಕೋಪಯೋಗಿ ಇಲಾಖೆ ಹಗರಣ: ಕೇಜ್ರಿವಾಲ್‌ ಸಂಬಂಧಿಯನ್ನು ಬಂಧಿಸಿದ ಎಸಿಬಿ

Pinterest LinkedIn Tumblr

ನವದೆಹಲಿ: ಲೋಕೋಪಯೋಗಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಕೇಜ್ರಿವಾಲ್ ಅವರ ಸೋದರ ಸಂಬಂಧಿ ಸುರೇಂದರ್ ಬನ್ಸಾಲ್ ಅವರ ಮಗ ವಿನಯ್‌ ಬನ್ಸಾಲ್‌ ಬಂಧಿತ ಆರೋಪಿ. ವಿಶೇಷ ಪೋಲಿಸ್‌ ಕಮಿಷನರ್‌ ಅರವಿಂದ್‌ ದೀಪ್‌ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

‘ತಮ್ಮ ತಂದೆಯ ಪಾಲುದಾರಿಕೆಯಲ್ಲಿ ಕಂಪೆನಿ ನಡೆಸಿಕೊಂಡಿರುವುದಾಗಿ ಹೇಳಿದ್ದ ಬನ್ಸಾಲ್‌, ನಿರ್ಮಾಣ ಕಾಮಗಾರಿಗೆ ಬಳಸುವ ಸಲಕರಣೆಗಳನ್ನು ಕೊಂಡುಕೊಳ್ಳುವ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿಸಿಕೊಳ್ಳಲು ನಕಲಿ ಬಿಲ್‌ಗಳನ್ನು ಸಲ್ಲಿಸಿದ್ದರು. ತನಿಖೆ ವೇಳೆ ಅಂತಹ ಯಾವುದೇ ಕಂಪೆನಿ ಇಲ್ಲದಿರುವುದು ಗೊತ್ತಾಗಿದ್ದು, ಬಿಲ್‌ಗಳೂ ನಕಲಿ ಎಂದು ತಿಳಿದು ಬಂದಿದೆ. ಇಂದು(ಗುರುವಾರ) ಆತನನ್ನು ಬಂಧಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ದೆಹಲಿಯ ಬಾಕೋಲಿ ಹಾಗೂ ಇಂದಿರಾ ನೆಹರು ಶಿಬಿರ ಪ್ರದೇಶಗಳಲ್ಲಿರುವ ಎರಡು ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ₹ 6 ಕೋಟಿ ಮೌಲ್ಯದ ನಕಲಿ ಬಿಲ್‌ಗಳನ್ನು ನೀಡಿದ್ದರು.

‘ಸುರೇಂದರ್ ಕುಮಾರ್‌ ಬನ್ಸಾಲ್‌ ಅವರು ಇಲಾಖೆಯಿಂದ ಹಣ ಪಡೆಯಲು ನಕಲಿ ಬಿಲ್‌ಗಳನ್ನು ಪಾವತಿಸಿದ್ದಾರೆ’ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಸಂಘಟನೆಯೊಂದರ ಸ್ಥಾಪಕ ರಾಹುಲ್‌ ಶರ್ಮಾ ಎನ್ನುವವರು ದೂರು ನೀಡಿದ್ದರು. ಅದರನ್ವಯ ಎಸಿಬಿ ಅಧಿಕಾರಿಗಳು 2017ರ ಮೇ ತಿಂಗಳಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

Comments are closed.