ಲಖನೌ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಪತ್ನಿ ಸಂಗೀತಾ ಸಿಂಗ್ ಅವರಿಂದ ಒಂದು ಕೋಟಿ ರುಪಾಯಿ ವಸೂಲಿ ಮಾಡಲು ಯತ್ನಿಸಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಲೋಕ್ ದ್ವಿವೇದಿ ಮತ್ತು ವಿಜಯ್ ರಾವತ್ ಎಂದು ಗುರುತಿಸಲಾಗಿದ್ದು, ಇಬ್ಬರು ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಸಂಗೀತಾ ಅವರಿಗೆ ಕರೆ ಮಾಡಿದ್ದಾರೆ. ಒಂದು ಕೋಟಿ ರುಪಾಯಿ ನೀಡಿದರೆ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ಪತಿಗೆ ಕ್ಲೀನ್ ಚಿಟ್ ಕೊಡಿಸುತ್ತೇವೆ ಎಂದು ಹೇಳಿ ಹಣ ವಸೂಲಿಗೆ ಯತ್ನಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಸಂಗೀತಾ ಸಿಂಗ್ ಅವರು ಇಬ್ಬರು ಆರೋಪಿಗಳ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಘಾಜಿಪುರ್ ಪೊಲೀಸ್ ಠಾಣೆಯ ಪೊಲೀಸರು ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಘಾಜಿಪುರ್ ಪೊಲೀಸ್ ಠಾಣೆ ಅಧಿಕಾರಿ ಸುಜೀತ್ ಕುಮಾರ್ ರೈ ಅವರು ತಿಳಿಸಿದ್ದಾರೆ.
ಉನ್ನಾವೋದ 17 ವರ್ಷದ ಬಾಲಕಿ ಮೇಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಶಾಸಕ ಸೆಂಗರ್ ಸದ್ಯ ಸೀತಾಪುರ್ ಜೈಲನಲ್ಲಿದ್ದಾರೆ.
Comments are closed.