ನಲ್ಲಗೊಂಡ: ಕೋಟ್ಯಂತರ ರೂಪಾಯಿ ಹಣವನ್ನು ನೀವು ಎಲ್ಲಾದರೂ, ಬಂಡಲ್‌ಗಟ್ಟಲೆ ತೆರೆದ ವಾಹನದಲ್ಲಿ ಇಟ್ಟುಕೊಂಡು ಹೋಗುತ್ತಿರುವುದನ್ನು ನೋಡಿದ್ದೀರಾ. ಇಂತಹ ವಿಚಿತ್ರ ಘಟನೆ ತೆಲಂಗಾಣದ ನಲಗೊಂಡದಲ್ಲಿ ನಡೆದಿದೆ. ಬ್ಯಾಂಕೊಂದರ 40 ಕೋಟಿ ರೂ. ಗರಿ ಗರಿ ನೋಟುಗಳನ್ನು ಟ್ರಾಲಿಯಲ್ಲಿ ತೆಗೆದುಕೊಂಡು ಹೋಗಲಾಗಿದೆ.
ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್ ಅಧಿಕಾರಿಗಳು ಇಂತಹ ರಿಸ್ಕ್ ಅನ್ನು ತೆಗೆದುಕೊಂಡಿದ್ದಾರೆ. 40 ಕೋಟಿ ರೂ. ಹೊಸ ಹೊಸ ನೋಟುಗಳನ್ನು ನಲ್ಲಗೊಂಡ ನಗರದಲ್ಲಿ ಟ್ರಾಫಿಕ್ ಮಧ್ಯೆ ಓಪನ್ ಟ್ರಾಲಿಯಲ್ಲಿ ತೆಗೆದುಕೊಂಡು ಹೋಗಲಾಗಿದೆ. ಇದನ್ನು ನೋಡಿದ ಜನತೆ ಬಂಡಲ್‌ಗಟ್ಟಲೆ ಹಣವನ್ನು ನೋಡಲು ವಾಹನದ ಹಿಂದೆ ಓಡಿಹೋಗಿದ್ದು, ಕಣ್ ಕಣ್ ಬಿಟ್ಟುಕೊಂಡು ನೋಡಿದ್ದಾರೆ.
ಗುರುವಾರ ತೆಲಂಗಾಣ ಸರಕಾರ ರೈತು ಬಂಧು ಸ್ಕೀಮ್ ಅನ್ನು ಉದ್ಘಾಟನೆ ಮಾಡಿದ್ರು. ಈ ಹಿನ್ನೆಲೆ ನಗರದ ಕ್ಲಾಕ್ ಟವರ್ ಸೆಂಟರ್‌ನಲ್ಲಿರುವ ಆರ್.ಪಿ. ರಸ್ತೆಯ ಎಸ್‌ಬಿಐ ಮುಖ್ಯ ಕಚೇರಿಯಿಂದ 5 ಬ್ಯಾಂಕುಗಳು ನಲಗೊಂಡ ಜಿಲ್ಲೆಯಲ್ಲಿ ಹಣ ವಿತರಿಸಬೇಕಿತ್ತು. ಆದರೆ, ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್ ಬಳಿ ಮುಚ್ಚಿರುವ ವಾಹನ ಇಲ್ಲವಾದ ಕಾರಣ ತೆರೆದ ಟ್ರಾಲಿಯಲ್ಲೇ 40 ಕೋಟಿ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಭದ್ರತೆಗೆ 3 ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಬಳಸಿಕೊಳ್ಳಲಾಗಿದೆ.
ಆಂಧ್ರ ಬ್ಯಾಂಕಿನ ಈ ಕ್ರಮವನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಬ್ಯಾಂಕ್ ಅಧಿಕಾರಿಗಳು ಹಣ ವಿತರಿಸುವುದನ್ನು ವಿಳಂಬ ಮಾಡುವುದು ಬೇಡವೆಂದು ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾಗಿಯೂ ಬ್ಯಾಂಕ್ ಹೇಳಿಕೊಂಡಿದೆ.
Comments are closed.