ಹೊಸದಿಲ್ಲಿ: ದೇಶದ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಇದು ಸಿಹಿ ಸುದ್ದಿ. ಯಾಕಂದ್ರೆ, ಈ ಬಾರಿ ಮುಂಗಾರು ಮಾರುತ ಕೇರಳಕ್ಕೆ 4 ದಿನ ಮುಂಚಿತವಾಗಿ ಅಂದ್ರೆ ಮೇ 28 ಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಮೇ 20 ರಂದು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಮುಂಗಾರು ಮಾರುತ ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಅಲ್ಲಿಂದ ಶ್ರೀಲಂಕಾಗೆ ಮುಂಗಾರು ಮಾರುತ ಪ್ರವೇಶ ಮಾಡಲಿದ್ದು, ನಂತರ ಮೇ 24 ರಂದು ಬಂಗಾಳಕೊಲ್ಲಿ ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಶನಿವಾರ ಮಾಹಿತಿ ನೀಡಿದೆ.
ಕೇರಳಕ್ಕೆ ಮೇ 28 ರಂದು ಮುಂಗಾರು ಪ್ರವೇಶಿಸಲಿದ್ದು, ನಂತರ ಭಾರತದ ಇತರೆ ಭಾಗಗಳಲ್ಲಿ ಮುಂಗಾರು ಮಳೆ ಆಗಲಿದೆ ಎಂದು ಹವಾಮಾನಶಾಸ್ತ್ರ ಮತ್ತು ಹವಾಮಾನ ಬದಲಾವಣೆಯ ಉಪಾಧ್ಯಕ್ಷ ಮಹೇಶ್ ಪಾಲಾವಟ್ ಹೇಳಿದ್ದಾರೆ.
ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡಿ, ನಂತರ ದೇಶದುದ್ದಕ್ಕೂ ಮುಂಗಾರು ಮಾರುತಗಳು ಹರಡಲಿದೆ. ಆದರೆ, ಈ ಬಾರಿ 4 ದಿನ ಮುಂಚಿತವಾಗಿಯೇ ಆಗಮಿಸಲಿರುವುದರಿಂದ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಈಗಾಗಲೇ ಸ್ಕೈಮೆಟ್ ಹಾಗೂ ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿವೆ.
Comments are closed.