ಶ್ರೀನಗರ: ಕಳೆದ ಏಳು ತಿಂಗಳಲ್ಲಿ 70ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದ ಭದ್ರತಾ ಪಡೆಗಳು ಇದೀಗ ಕಾರ್ಯತಂತ್ರ ಬದಲಿಸಿದ್ದು, ಉಗ್ರರನ್ನು ಜೀವಂತ ಸೆರೆಹಿಡಿಯಲು ಗಮನ ಕೇಂದ್ರೀಕರಿಸಿವೆ.
ಉಗ್ರ ಸಂಘಟನೆಗಳಿಗೆ ಹೊಸ ನೇಮಕಾತಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಗ್ರರನ್ನು ಜೀವಂತ ಸೆರೆ ಹಿಡಿಯಲು ಆದ್ಯತೆ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಯುವಕರಲ್ಲಿ ಮೂಲಭೂತವಾದವನ್ನು ಪ್ರಚೋದಿಸಿ ಅವರನ್ನು ಉಗ್ರ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತ ಬಹಿರಂಗವಾಗಿ ಕೆಲಸ ಮಾಡುವ ಏಜೆಂಟರ ಜಾಲವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕಾರ್ಯತಂತ್ರ ಬದಲಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
‘ಅವರ ಮನಸ್ಥಿತಿಯನ್ನು ಅರಿಯಲು ಜೀವಂತ ಸೆರೆಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. 15-16 ವರ್ಷದ ಬಾಲಕನನ್ನು ಗುಂಡಿನ ಕಾಳಗದಲ್ಲಿ ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ಬ್ರೈನ್‌ವಾಶ್ ಮಾಡಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳ ಹಿಂದೆ ಬೇರೇನೋ ಕತೆಯಿರಬಹುದು’ ಎಂದು ಉಗ್ರರ ದಮನ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ತಿಳಿಸಿದರು.
ರಮ್ಜಾನ್ ಅವಧಿಯಲ್ಲಿ ಉಗ್ರ ದಮನ ಕಾರ್ಯಾಚರಣೆ ನಡೆಸದಂತೆ ಭದ್ರತಾ ಪಡೆಗಳಿಗೆ ಕೇಂದ್ರ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ, ಸದ್ದಾಂ ಪದ್ದಾರ್, ಇಸಾ ಫಜಿಲ್ ಮತ್ತು ಸಮೀರ್ ಟೈಗರ್‌ನಂತಹ ಹಾರ್ಡ್‌ಕೋರ್ ಉಗ್ರರನ್ನು ಕೊಂದು ಹಾಕಲೇಬೇಕಾದ ಗುರಿ ಭದ್ರತಾ ಪಡೆಗಳ ಮುಂದಿದೆ. ಏಕೆಂದರೆ ಉಗ್ರಸಂಘಟನೆಗಳಿಗೆ ಹೊಸ ನೇಮಕಾತಿ ಮಾಡುತ್ತಿರುವ ಹಿಂದಿನ ಶಕ್ತಿಗಳು ಈ ಉಗ್ರರೇ ಆಗಿದ್ದಾರೆ.
ಈಗಾಗಲೇ ಹಲವಾರು ಕಟ್ಟರ್ ಉಗ್ರರನ್ನು ಕೊಂದು ಮುಗಿಸಲಾಗಿದ್ದು, ಇದೀಗ ಕಾರ್ಯತಂತ್ರ ಬದಲಿಸಲು ಭದ್ರತಾ ಪಡೆಗಳು ಮುಂದಾಗಿವೆ. ನಿರ್ದಿಷ್ಟ ಮಾಹಿತಿ ಮೇರೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ. ಹೊಸದಾಗಿ ನೇಮಕಗೊಂಡ ಉಗ್ರರನ್ನು ಜೀವಂತ ಸೆರೆ ಹಿಡಿಯಲು ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
Comments are closed.