ರಾಷ್ಟ್ರೀಯ

ಎರಡನೇ ಮದುವೆಯಾಗಿದ್ದು, ಫೇಸ್‌ ಬುಕ್‌ ಪ್ರಿಯತಮೆಯ ಮದುವೆಗೆ ಅಡ್ಡಿಪಡಿಸಿದ ಹೆತ್ತವರ ಕೊಲೆ!

Pinterest LinkedIn Tumblr


ಹೊಸದಿಲ್ಲಿ: ಫೇಸ್‌ ಬುಕ್‌ ಪ್ರಿಯತಮೆಯನ್ನು ಮದುವೆಯಾಗುವುದಕ್ಕೆ ಅನುಮತಿ ನೀಡದ ಹೆತ್ತವರನ್ನು 25 ವರ್ಷದ ತರುಣನೋರ್ವ ಕೊಲೆಗೈದ ಘಟನೆ ಆಗ್ನೇಯ ದಿಲ್ಲಿಯ ಜಾಮಿಯಾ ನಗರದಲ್ಲಿ ನಡೆದಿದೆ.

ಅಬ್ದುಲ್‌ ರೆಹಮಾನ್‌ ಗೆ ಕಾನ್ಪುರದ ಮಹಿಳೆಯೊಬ್ಬಳೊಂದಿಗೆ ಕಳೆದ ಎರಡು ವರ್ಷಗಳಿಂದ ಫೇಸ್‌ ಬುಕ್‌ನಲ್ಲಿ ಗೆಳೆತನ ಬೆಳೆದಿತ್ತು. ಆತ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಅದಕೆ ಆತನ ಹೆತ್ತವರು ಅನುಮತಿ ನಿರಾಕರಿಸಿದರು. ಕ್ರುದ್ದನಾದ ಆತ ತನ್ನ ತಂದೆ 55ರ ಹರೆಯದ ಶಮೀಮ್‌ ಅಹ್ಮದ್‌ ಮತ್ತು 50ರ ಹರೆಯದ ತಾಯಿ ತಸ್ಲಿಮ್‌ ಬಾನೋ ಅವರನ್ನು , ಆಸ್ತಿ ಕೈವಶ ಮಾಡಿಕೊಳ್ಳುವ ದುರುದ್ದೇಶದಿಂದ ಕೊಂದು ಮುಗಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ರೆಹಮಾನ್‌ನ ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಅನಂತರದಲ್ಲಿ ಆತನಿಗೆ ಫೇಸ್‌ ಬುಕ್‌ನಲ್ಲಿ ಕಾನ್ಪುರದ ಮಹಿಳೆಯೊಂದಿಗೆ ಗೆಳೆತನ ಕುದುರಿತ್ತು. ಆದರೆ 2017ರಲ್ಲಿ ರೆಹಮಾನ್‌ ತನ್ನ ಹೆತ್ತವರ ಆಸೆ ಆಕಾಂಕ್ಷೆಯ ಪ್ರಕಾರ ಇನ್ನೋರ್ವ ಮಹಿಳೆಯನ್ನು ಮದುವೆಯಾಗಿದ್ದ.

ಹಾಗಿದ್ದರೂ ಫೇಸ್‌ ಬುಕ್‌ ಪ್ರಿಯತಮೆಯೊಂದಿಗಿನ ರೆಹಮಾನ್‌ನ ವಿವಾಹೇತರ ಸಂಬಂಧ ಜೋರಾಗಿ ನಡೆದಿತ್ತು. ರೆಹಮಾನ್‌ ಈಕೆಯನ್ನು ಮದುವೆಯಾಗಲು ಬಯಸಿದ್ದ. ಇದಕ್ಕೆ ಹೆತ್ತವರು ಅನುಮತಿ ನಿರಾಕರಿಸಿದ್ದರು ಎಂದು ಆಗ್ನೇಯ ದಿಲ್ಲಿಯ ಪೊಲೀಸ್‌ ಉಪಾಯುಕ್ತ ಚಿನ್ಮಯ್‌ ಬಿಸ್ವಾಲ್‌ ಹೇಳಿದರು.

ಕಾಲ್‌ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದ ರೆಹಮಾನ್‌ ದ್ರವ್ಯವ್ಯಸನದಿಂದಾಗಿ ಕೆಲಸ ಕಳೆದುಕೊಂಡಿದ್ದ. ಹೆತ್ತವರನ್ನು ಕೊಂದು ಮುಗಿಸುವ ಸಂಚು ರೂಪಿಸಿದ್ದ ಆತ ಈ ಕೃತ್ಯಕ್ಕಾಗಿ ತನ್ನಿಬ್ಬರು ಗೆಳೆಯರಾದ ನದೀಂ ಖಾನ್‌ ಮತ್ತು ಗುಡ್ಡು ಎಂಬವರನ್ನು 2.50 ಲಕ್ಷ ರೂ. ಗೆ ಗೊತ್ತುಪಡಿಸಿಕೊಂಡಿದ್ದ. ಅಂತೆಯೇ ಅವರು ರೆಹಮಾನ್‌ನ ಸೂಚನೆ ಪ್ರಕಾರ ಆತನ ಮನೆಗೆ ತೆರಳಿ ಮನೆಯಲ್ಲಿ ಮಲಗಿಕೊಂಡಿದ್ದ ಆತನ ಹೆತ್ತವರ ಮೇಲೆ ದಾಳಿ ನಡೆಸಿ ಅವರನ್ನು ಉಸಿರುಗಟ್ಟಿಸಿ ಸಾಯಿಸಿದರು.

ಬಂಧಿತ ರೆಹಮಾನ್‌ನನ್ನು ತನಿಖಾಧಿಕಾರಿಗಳ ಮೇ 21ರಂದು ಪ್ರಶ್ನಿಸಿದಾಗ ಆತ ತನ್ನ ಇಡಿಯ ಪ್ರಹಸನವನ್ನು ಅವರ ಮುಂದೆ ಬಿಚ್ಚಿಟ್ಟ. ಪೊಲೀಸರು ಒಡನೆಯೇ ಆತನ ಇಬ್ಬರು ಸಹಚರರನ್ನು ಬಂಧಿಸಿದರು.

Comments are closed.