ಕೊಯಮುತ್ತೂರು : 30 ವರ್ಷ ಪ್ರಾಯದ ಮುತ್ತುಲಕ್ಷ್ಮಿ ಎಂಟೆದೆಯ ಧೈರ್ಯ ಸಾಹಸ ತೋರಿ ಚಿರತೆಯೊಂದಿಗೆ ಹೋರಾಡಿ ತನ್ನ 11 ವರ್ಷದ ಮಗಳು ಚಿರತೆಗೆ ಬಲಿಯಾಗುವುದನ್ನು ತಪ್ಪಿಸಿ ಜೀವಸಹಿತ ಪಾರು ಮಾಡಿದ್ದಾಳೆ.
ಮುತ್ತುಲಕ್ಷ್ಮಿ ಮತ್ತು ಆಕೆಯ 11 ವರ್ಷ ಪ್ರಾಯದ ಮಗಳು ಸತ್ಯಾ, ನಿನ್ನೆ ಶುಕ್ರವಾರ ರಾತ್ರಿ ತಮ್ಮ ಮನೆಯ ಹಿಂದೆ ಉರುವಲು ಸಂಗ್ರಹಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆಯೇ ಚಿರತೆಯೊಂದು ಪ್ರತ್ಯಕ್ಷವಾಗಿ ಸತ್ಯಾ ಳ ಮೇಲೆ ಛಂಗನೆ ಹಾರಿ ಆಕೆಯ ಕುತ್ತಿಗೆಗೆ ಬಾಯಿ ಹಾಕಿ ಎಳೆದಾಡಿತು.
ಇದನ್ನು ಕಂಡ ಮುತ್ತುಲಕ್ಷ್ಮಿ ಧೃತಿಗೆಡದೆ ಚಿರತೆಯ ಮೇಲೆ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬಲವಾದ ಪ್ರಹಾರ ಇಕ್ಕಿದಳು. ಪರಿಣಾಮವಾಗಿ ಚಿರತೆ ಸತ್ಯಾಳನ್ನು ಬಿಟ್ಟು ಪಲಾಯನ ಮಾಡಿತು. ತೀವ್ರ ಗಾಯಗೊಂಡ ಸತ್ಯಾಳನ್ನು ಒಡನೆಯೇ ಸರಕಾರಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಲಾಯಿತು. ಆಕೆ ಈಗ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿಷಯ ತಿಳಿದು ಧಾವಿಸಿ ಬಂದ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಮುಂದಾಗಿದ್ದಾರೆ; ಕಳೆದ ಹತ್ತು ದಿನಗಳಿಂದ ಈ ಚಿರತೆ ಈ ಗ್ರಾಮದ ಜನರ ಮೇಲೆ ದಾಳಿ ಮಾಡುತ್ತಲೇ ಬಂದಿದ್ದು ಹಲವು ಪ್ರಾಣಿಗಳು ಅದಕ್ಕೆ ಬಲಿಯಾಗಿವೆ.
ಹದಿನೈದು ದಿನಗಳ ಹಿಂದೆ ಕಂಚಮಲೈ ಎಂಬಲ್ಲಿ ಇದೇ ರೀತಿಯ ದಾಳಿಯಲ್ಲಿ ಮಹಿಳೆಯೊಬ್ಬಳು ಚಿರತೆಗೆ ಬಲಿಯಾಗಿದ್ದಳು.
Comments are closed.