ರಾಷ್ಟ್ರೀಯ

ರಾಜ್ಯದ ಆನೆಗಳಿಗೆ ಉತ್ತರ ಪ್ರದೇಶದಲ್ಲಿ ಭಾಷಾ ಸಮಸ್ಯೆ!

Pinterest LinkedIn Tumblr


ಬರೇಲಿ: ಕರ್ನಾಟಕದ ಆನೆಗಳನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯಲು ಭಾಷಾ ಸಮಸ್ಯೆ ಎದುರಾಗುತ್ತದೆ. ಇದನ್ನು ಅರಿತ ಅಲ್ಲಿನ ಅರಣ್ಯಾಧಿಕಾರಿಗಳು ಸಮಸ್ಯೆ ನಿವಾರಿಸಲು ಸೂಪರ್ ಪ್ಲಾನ್ ಮಾಡಿದ್ದಾರೆ. ಆನೆಗಳು ಬುದ್ಧಿವಂತಿಕೆ ತೋರಿಸುತ್ತವೆ. ಅವುಗಳಿಗೆ ಮಾನವ ದೇಹ ಭಾಷೆ ಅರ್ಥವಾಗುತ್ತವೆ ಹಾಗೂ ನೆನಪಿರುತ್ತವೆ. ಹೀಗಾಗಿ, ಕರ್ನಾಟಕದ 10 ಆನೆಗಳನ್ನು ಉತ್ತರಪ್ರದೇಶದ ದುಧವಾ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಕರೆದೊಯ್ಯುವ ಮುನ್ನ ಆನೆಗಳಿಗೆ ಭಾಷಾ
ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.

ಕರ್ನಾಟಕದ 10 ಆನೆಗಳನ್ನು ಉತ್ತರ ಪ್ರದೇಶದ ಮೀಸಲು ಗಸ್ತು ಪಡೆಗೆ ಸೇರಿಸಿಕೊಳ್ಳಲು ದುಧವಾ ಹುಲಿ ಸಂರಕ್ಷಣಾ ಪ್ರದೇಶದ ಅಧಿಕಾರಿಗಳು ಸಿದ್ಧತೆ ನಡೆಸಿರುತ್ತಾರೆ. ಆದರೆ, ಕರ್ನಾಟಕದ ಆನೆಗಳು ಕನ್ನಡದಲ್ಲಿ ಆದೇಶ ಮಾಡಿದರೆ ಮಾತ್ರ ಪ್ರತಿಕ್ರಿಯೆ ನೀಡುತ್ತವೆ ಎಂದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೆ, ಅಲ್ಲಿನ ಮಾವುತರು ಕೇವಲ ಹಿಂದಿಯಲ್ಲಿ ಮಾತ್ರ ಮಾತನಾಡುತ್ತಾರೆ. ಹೀಗಾಗಿ, ಭಾಷಾ ಸಮಸ್ಯೆಯಾಗುತ್ತದೆ ಎಂದು 6 ಮಾವುತರನ್ನು ಕರ್ನಾಟಕಕ್ಕೆ ಕಳಿಸಿ ಎರಡು ತಿಂಗಳ ಕಾಲ ಟ್ರೈನಿಂಗ್‌ಗೆ ಕಳಿಸುತ್ತಾರೆ. ಬಳಿಕ, 2,500 ಕಿ.ಮೀಗಳ ದೂರದ ಹಾದಿಯನ್ನು ರಸ್ತೆಯ ಮೂಲಕವೇ 10 ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳಿಸುತ್ತಾರೆ. ಇನ್ನು, ತರಬೇತಿ ವೇಳೆ ಕರ್ನಾಟಕದ ಮಾವುತರು ಬಳಸುವ ಕನ್ನಡದ ಪದಗಳನ್ನು ಅಲ್ಲಿನ ಮಾವುತರಿಗೆ ಕಲಿಸಲಾಗಿದೆ. ಜತೆಗೆ, ಆನೆಗಳು ತಮ್ಮ ಹೊಸ ಮನೆಯಲ್ಲಿ ಅಡ್ಜಸ್ಟ್ ಆಗಲೆಂದು ಕರ್ನಾಟಕದಿಂದ 12 ಮಾವುತರನ್ನು ಜತೆಗೆ ಕರೆದೊಯ್ಯಲಾಗಿದೆ ಎಂದು ಮೀಸಲು ಗಸ್ತು ಪಡೆಯ ಉಪ ನಿರ್ದೇಶಕ ಮಹಾವೀರ್ ಕೌಜಲಗಿ ಮಾಹಿತಿ ನೀಡಿದ್ದಾರೆ.

ಇನ್ನು, ಕಳೆದ 24 ವರ್ಷಗಳಿಂದ ಮೀಸಲು ಗಸ್ತು ಪಡೆಯಲ್ಲಿ ಮಾವುತರಾಗಿ ಕೆಲಸ ಮಾಡುತ್ತಿದ್ದ ಇರ್ಷದ್ ಅಲಿ ಸಹ, ತರಬೇತಿ ವೇಳೆ ನಾವು ಕನ್ನಡ ಪದಗಳನ್ನು ತಿಳಿದುಕೊಂಡೆವು. ತಿರುಗು, ಮಲಗು, ಕುಳಿತು ಕೋ, ಹಿಂದಕ್ಕೆ ಹೋಗು ಎಂದು ಆನೆಗಳಿಗೆ ಆದೇಶಿಸುವ ಕನ್ನಡದ ಪದಗಳನ್ನು ನಾವು ತಿಳಿದುಕೊಂಡೆವು. ಅಲ್ಲದೆ, ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಆದೇಶ ಮಾಡಿ, ಆನೆಗಳಿಗೂ ಹಿಂದಿ ಭಾಷೆ ಕಲಿಯುವಂತೆ ಮಾಡಿದ್ದೇವೆ. ಕೇವಲ 12 ದಿನಗಳಲ್ಲಿ ಹಿಂದಿಯಲ್ಲಿ ಆನೆಗಳಿಗೆ ಆದೇಶಿಸುವ ಪದಗಳನ್ನು ತಿಳಿದುಕೊಂಡಿದೆ. ಅಲ್ಲದೆ, ಆನೆಗಳಿಗೆ ಆದೇಶ ನೀಡಲು ಮಾನವ ದೇಹ ಭಾಷೆ ಬಹಳ ಮುಖ್ಯವಾಗಿದೆ. ಇದು ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಒಂದೇ ಇದೆ ಎಂದು ಅಲಿ ಹೇಳಿದ್ದಾರೆ. ಆನೆಗಳು ವೇಗವಾಗಿ ಕಲಿಯುತ್ತವೆ ಹಾಗೂ ಬುದ್ಧಿವಂತಿಕೆಯುಳ್ಳ ಪ್ರಾಣಿಗಳು. ಅವುಗಳು ಮಾವುತರ ನಿರೀಕ್ಷೆಗಳು ಮತ್ತು ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತವೆ ಎಂದು ವೈಲ್ಡ್‌ ಲೈಫ್‌ ಎಸ್‌ಓಎಸ್‌ ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕ ಕಾರ್ತಿಕ್ ಸತ್ಯನಾರಾಯಣ್ ಸಹ ಮಾಹಿತಿ ನೀಡಿದ್ದಾರೆ.

ಕರ್ನಾಟಕದಿಂದ ಉತ್ತರ ಪ್ರದೇಶಕ್ಕೆ ಬಂದಿದ್ದ 12 ಮಾವುತರ ಪೈಕಿ ಐವರು ಈ ವಾರ ವಾಪಸ್ ಹೋಗಲಿದ್ದು, ಇನ್ನು 10 ದಿನಗಳಲ್ಲಿ ಉಳಿದವರು ಸಹ ಹೋಗುತ್ತಾರೆ. ಈಗಾಗ್ಲೇ, ಅವರು ಕರ್ನಾಟಕದ ಆನೆಗಳಿಂದ ದೂರದಲ್ಲಿ ವಾಸ ಮಾಡುತ್ತಿದ್ದು, ಅವರನ್ನು ಆನೆಗಳು ಮರೆತು ಹೋಗಲಿ ಎಂದು ಹೀಗೆ ಮಾಡುತ್ತಿದ್ದೇವೆ ಎಂದು ಕೌಜಲಗಿ ಮಾಹಿತಿ ನೀಡಿದ್ದಾರೆ. ಇನ್ನು, 4 ತಿಂಗಳ ಕಾಲ ಪ್ರತ್ಯೇಕವಾಗಿ ಇಡುವ ಅವಧಿ ಮುಗಿದ ಬಳಿಕ ಕರ್ನಾಟಕದ 10 ಆನೆಗಳ ಆರೋಗ್ಯ ತಪಾಸಣೆ ನಡೆಸಿ ದುಧವಾ ಅರಣ್ಯದಲ್ಲಿರುವ ಇತರೆ 13 ಆನೆಗಳೊಂದಿಗೆ ಅವುಗಳನ್ನು ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ
ನೀಡಿದ್ದಾರೆ.

Comments are closed.